ಮಂಗಳೂರು: ದ.ಕ ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ವೆನ್ಲಾಕ್ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮೂವರು ಗುಣಮುಖರಾಗಿ ಮನೆ ಸೇರಿದ್ದಾರೆ.
ಮೇ 12ರಂದು ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದ ಕಾರ್ಕಳ ನಿವಾಸಿಗಳಾದ 26 ವರ್ಷದ ಪುರುಷ ಮತ್ತು 50 ವರ್ಷದ ಮಹಿಳೆ ಹಾಗೂ ಮೇ 13ರಂದು ದಾಖಲಾಗಿದ್ದ 38 ವರ್ಷದ ಮಂಗಳೂರು ಸೋಮೇಶ್ವರ ನಿವಾಸಿ ಆಸ್ಪತ್ರೆಯಿಂದ ಗುಣಮುಖರಾಗಿ ಮನೆಗೆ ಹೋಗಿದ್ದಾರೆ.
ಕೋವಿಡ್ -19 ಸೋಂಕು ಶಂಕೆ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ 517 ಮಂದಿಯ ಗಂಟಲು ದ್ರವದ ಸ್ಯಾಂಪಲ್ ಪರೀಕ್ಷೆಗೆ ರವಾನೆ ಮಾಡಲಾಗಿದೆ. ಈ ಹಿಂದೆ ಪರೀಕ್ಷೆಗೆಂದು ಕಳುಹಿಸಿರುವ 321 ಮಂದಿಯ ಗಂಟಲು ದ್ರವದ ಪರೀಕ್ಷಾ ವರದಿ ಬಂದಿದೆ. ಅದರಲ್ಲಿ 310 ಮಂದಿಯಲ್ಲಿ ನೆಗೆಟಿವ್ ಬಂದಿದ್ದು, 11 ಮಂದಿಗೆ ಸೋಂಕು ದೃಢಗೊಂಡಿದೆ. 1267 ಮಂದಿಯ ವರದಿ ಬರಬೇಕಾಗಿದ್ದು, ಒಟ್ಟು 20 ಮಂದಿ ನಿಗಾದಲ್ಲಿದ್ದಾರೆ.
27 ಮಂದಿಯನ್ನು ಮಂಗಳೂರಿನ ಇಎಸ್ಐ ಆಸ್ಪತ್ರೆಯಲ್ಲಿ ಕ್ವಾರಂಟೈನ್ನಲ್ಲಿ ಇರಿಸಲಾಗಿದ್ದು, 47 ಮಂದಿಯನ್ನು ಸುರತ್ಕಲ್ನ ಎನ್ಐಟಿಕೆಯಲ್ಲಿ ಕ್ವಾರಂಟೈನ್ನಲ್ಲಿ ಇರಿಸಲಾಗಿದೆ. ವೆನ್ಲಾಕ್ ಆಸ್ಪತ್ರೆಯ ಕ್ವಾರಂಟೈನ್ನಲ್ಲಿ ಯಾರೂ ಇಲ್ಲ. 6,073 ಮಂದಿ 28 ದಿನಗಳ ಹೋಮ್ ಕ್ವಾರಂಟೈನ್ ಮುಗಿಸಿದ್ದಾರೆ. ಮಂಗಳೂರಲ್ಲಿ ಈವರೆಗೆ 42,264 ಮಂದಿಯನ್ನು ಸ್ಕ್ರೀನಿಂಗ್ ಮಾಡಲಾಗಿದೆ.
ಈವರೆಗೆ 8,047 ಮಂದಿಯ ಗಂಟಲು ದ್ರವ ಪಡೆಯಲಾಗಿದೆ. 6,780 ಮಂದಿಯ ವರದಿ ಬಂದಿದ್ದು, ಅದರಲ್ಲಿ 6,699 ಮಂದಿಯ ವರದಿ ನೆಗೆಟಿವ್ ಬಂದಿವೆ. 81 ಮಂದಿಯಲ್ಲಿ ಸೋಂಕು ದೃಢಗೊಂಡಿದ್ದು, 29 ಮಂದಿ ಚಿಕಿತ್ಸೆ ಮುಗಿಸಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. 45 ಮಂದಿ ವೆನ್ಲಾಕ್ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 7 ಮಂದಿ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿಯವರ ಪ್ರಕಟಣೆ ತಿಳಿಸಿದೆ.