ಮಂಗಳೂರು: ನಗರದ ಕಾರ್ ಸ್ಟ್ರೀಟ್ನ ಕ್ರಾಸ್ ರಸ್ತೆಯಲ್ಲಿರುವ ಪ್ರಗತಿ ಜ್ಯುವೆಲ್ಲರ್ಸ್ಗೆ ಗ್ರಾಹಕರ ಸೋಗಿನಲ್ಲಿ ಬಂದ ಆರೋಪಿಗಳು ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ಈಗ ಆ ಮೂರು ಮಂದಿ ಆರೋಪಿಗಳನ್ನು ಮಂಗಳೂರು ಉತ್ತರ ಠಾಣಾ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಬಂಧಿತರನ್ನು ಉಳ್ಳಾಲದ ಮಂಜನಾಡಿಯ ಊರುಮನೆ ನಿವಾಸಿ ಮಹಮ್ಮದ್ ಸಿನಾನ್ (25), ಉಳ್ಳಾಲದ ಮಂಜನಾಡಿಯ ನಾಟೆಕಲ್ ನಿವಾಸಿ ಹೈದರ್ ಆಲಿ ಆಸಿಲ್ (20), ಉಳ್ಳಾಲದ ಮಂಜನಾಡಿಯ ನಾಟೆಕಲ್ನ ಅಸೈಗೋಳಿ ನಿವಾಸಿ ಮೊಹಮ್ಮದ್ ತಸ್ವೀರ್ (34) ಎಂದು ಗುರುತಿಸಲಾಗಿದೆ.
ಆರೋಪಿಗಳು ಮಂಗಳೂರು ಉತ್ತರ ಠಾಣಾ ವ್ಯಾಪ್ತಿಯ ಕಾರ್ ಸ್ಟ್ರೀಟ್ ಬಳಿಯ ಜಿಎಚ್ಎಸ್ ಕ್ರಾಸ್ ರಸ್ತೆಯಲ್ಲಿರುವ ಪ್ರಗತಿ ಜ್ಯುವೆಲ್ಲರ್ಸ್ಗೆ ಗ್ರಾಹಕರ ಸೋಗಿನಲ್ಲಿ ಬಂದಿದ್ದರು. ಆ ಬಳಿಕ ಜ್ಯುವೆಲ್ಲರಿ ಸಿಬ್ಬಂದಿಯ ಗಮನವನ್ನು ಬೇರೆಡೆಗೆ ಸೆಳೆದು 97.11 ಗ್ರಾಂ ತೂಕದ 6,00,000 ರೂ. ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ಈ ಬಗ್ಗೆ ಪ್ರಗತಿ ಜ್ಯುವೆಲ್ಲರ್ಸ್ ಮಾಲಿಕ ವಿನೋದ್ ಶೇಠ್ ಅವರು ಮಂಗಳೂರು ನಗರ ಉತ್ತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾರ್ಯಾಚರಣೆ ನಡೆಸಿ ಮಂಗಳೂರು ಕೇಂದ್ರ ಮಾರುಕಟ್ಟೆ ಪರಿಸರದಲ್ಲಿ ಆರೋಪಿಗಳಾದ ಮಹಮ್ಮದ್ ಸಿನಾನ್, ಹೈದರ್ ಆಲಿ ಆಸಿಲ್ ಮತ್ತು ಮೊಹಮ್ಮದ್ ತಸ್ವೀರನನ್ನು ಬಂಧಿಸಿದ್ದಾರೆ. ಆರೋಪಿಗಳಿಂದ 6 ಲಕ್ಷ ಮೌಲ್ಯದ ಚಿನ್ನಾಭರಣ, ಕೃತ್ಯಕ್ಕೆ ಬಳಸಿರುವ 90 ಸಾವಿರ ರೂ. ಮೌಲ್ಯದ ಸ್ಕೂಟರ್, 25 ಸಾವಿರ ರೂ. ಮೌಲ್ಯದ 2 ಮೊಬೈಲ್ ಫೋನ್ಗಳು ಸೇರಿದಂತೆ ಒಟ್ಟು 7 ಲಕ್ಷದ 15 ಸಾವಿರ ರೂ. ಮೌಲ್ಯದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಓದಿ: ಕಿಡ್ನ್ಯಾಪ್ ಕೇಸ್ ಭೇದಿಸಲು ಹೊರಟು ಹತ್ಯೆ ಪ್ರಕರಣದ ಜಾಡು ಹಿಡಿದ ಜ್ಞಾನಭಾರತಿ ಪೊಲೀಸರು