ಮಂಗಳೂರು: ಮದರಸಾಗಳಲ್ಲಿ ಧಾರ್ಮಿಕ ಶಿಕ್ಷಣದೊಂದಿಗೆ ಆಧುನಿಕ ಶಿಕ್ಷಣ ನೀಡುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಈ ಮೂಲಕ ಅಲ್ಲಿಂದ ಕಲಿತು ಹೊರಬರುವ ವಿದ್ಯಾರ್ಥಿಗಳಿಗೆ ಎಸ್ಎಸ್ಎಲ್ಸಿ ತತ್ಸಮಾನ ಪ್ರಮಾಣ ಪತ್ರ ನೀಡಲು ಉದ್ದೇಶಿಸಲಾಗಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ಕೈಮಗ್ಗ ಮತ್ತು ಜವಳಿ ಖಾತೆ ಸಚಿವ ಶ್ರೀಮಂತ ಬಾಳಾ ಸಾಹೇಬ ಪಾಟೀಲ ಹೇಳಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾತನಾಡಿದ ಅವರು, ಇದರಿಂದ ಅವರಿಗೆ ಧಾರ್ಮಿಕ ಶಿಕ್ಷಣದೊಂದಿಗೆ ವೃತ್ತಿಪರ ಶಿಕ್ಷಣ ಅಥವಾ ಪದವಿ ಪೂರ್ವ ಶಿಕ್ಷಣ ಪಡೆಯಲು ಅನುಕೂಲವಾಗಲಿದೆ ಎಂದರು.
ಈ ಬಗ್ಗೆ ಮುಸ್ಲಿಂ ಸಮುದಾಯದ ಮುಖಂಡರೊಂದಿಗೆ ಚರ್ಚೆ ನಡೆಸಿದ್ದೇವೆ. ಎಲ್ಲರೂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಎಲ್ಲ ರೀತಿಯಲ್ಲಿ ಅನುಕೂಲವಾದಲ್ಲಿ ದೇಶದಲ್ಲಿಯೇ ಮೊದಲ ಬಾರಿಗೆ ನಮ್ಮ ರಾಜ್ಯದಲ್ಲಿ ಈ ಯೋಜನೆ ಯಶಸ್ವಿಯಾಗಿ ಅನುಷ್ಠಾನಗೊಳ್ಳಲಿದೆ. ಆಧುನಿಕ ಶಿಕ್ಷಣದಲ್ಲಿ ಇರುವಂತೆ ಮೂಲವಿಜ್ಞಾನ, ಗಣಿತ, ಸಮಾಜ, ಇಂಗ್ಲಿಷ್ ಇತ್ಯಾದಿ ವಿಷಯಗಳನ್ನು ಅಳವಡಿಸಲಾಗುತ್ತದೆ. ಎಷ್ಟು ವಿಷಯಗಳು ಇರಬೇಕೆಂದು ತಜ್ಞರ ಬಗ್ಗೆ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ.
40 ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಅಲ್ಪಸಂಖ್ಯಾತ ಇಲಾಖೆಯ ಮೂಲಕ ವ್ಯಾಸಂಗ ಮಾಡುತ್ತಿದ್ದಾರೆ. ಕೆಲವೊಂದು ಕಡೆಗಳಲ್ಲಿ ಹೊರತುಪಡಿಸಿ ಹೆಚ್ಚಿನ ಕಡೆಗಳಲ್ಲಿ ಫಲಿತಾಂಶವೂ ಉತ್ತಮವಾಗಿದೆ. ಈವರೆಗೆ ಅಲ್ಪಸಂಖ್ಯಾತ ಇಲಾಖೆಯಲ್ಲಿ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಶಿಕ್ಷಣ ನೀಡಲಾಗುತ್ತಿದೆ. ಇದೀಗ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಕೌಶಲ್ಯ ಅಭಿವೃದ್ಧಿ ಮಾಡಲು ಐಟಿಐ ಹಾಗೂ ಪಾಲಿಟೆಕ್ನಿಕ್ ಶಿಕ್ಷಣ ತರಬೇತಿ ನೀಡಲು ಚಿಂತನೆ ನಡೆಸುತ್ತಿದ್ದೇವೆ ಎಂದಿದ್ದಾರೆ.
ಅಲ್ಪಸಂಖ್ಯಾತ ಇಲಾಖೆ ಸ್ಕಾಲರ್ಶಿಪ್ಗೆ ಪ್ರತಿವರ್ಷ 250-270 ಕೋಟಿ ರೂ. ನೀಡಲಾಗುತ್ತಿತ್ತು. ಈ ಬಾರಿ ಕೊರೊನಾ ಕಾರಣದಿಂದ 90 ಕೋಟಿ ರೂ. ಅನುದಾನ ದೊರಕಿದೆ. ಈಗಾಗಲೇ 3.50 ಲಕ್ಷ ವಿದ್ಯಾರ್ಥಿಗಳಿಗೆ 78 ಕೋಟಿ ರೂ. ಸ್ಕಾಲರ್ಶಿಪ್ ನೀಡಲಾಗಿದೆ. ಇನ್ನೂ 4.50 ಲಕ್ಷ ವಿದ್ಯಾರ್ಥಿಗಳ ಅರ್ಜಿ ಬಾಕಿ ಇದೆ. ಅನುದಾನ ಕಡಿಮೆಯಾಗಿರುವುದರಿಂದ ಸಮಸ್ಯೆಯಾಗಿದೆ. ಮುಂದಿನ ವರ್ಷದಿಂದ ಹೆಚ್ಚಿನ ಅನುದಾನ ಮೀಸಲಿರಿಸಲು ಮನವಿ ಮಾಡಲಾಗುವುದು ಎಂದಿದ್ದಾರೆ.
ಇದನ್ನೂ ಓದಿ: ಫೆ.14ರಂದು ಪ್ರೇಮಿಗಳ ದಿನಾಚರಣೆ: ಬಜರಂಗದಳ ವಾರ್ನಿಂಗ್ ಬೆನ್ನಿಗೆ ಪೊಲೀಸರ ಕ್ರಮ