ಮಂಗಳೂರು: ನಗರದ ತೇಜಸ್ವಿನಿ ಆಸ್ಪತ್ರೆಯಲ್ಲಿ ಹೊಸದೊಂದು ರೋಬೋಟ್ ಬಂದಿದೆ. ನೋಡಲು ಯಂತ್ರದಂತಿರುವ ಈ ರೋಬೋಟ್ ಕೋವಿಡ್-19 ಸೇರಿದಂತೆ ಹಲವು ವೈರಾಣುಗಳ ನಾಶ ಮಾಡುತ್ತದಂತೆ.
ವನೋರ ರೋಬೋಟ್ಸ್ ಪ್ರೈವೆಟ್ ಲಿಮಿಟೆಡ್ ಅಭಿವೃದ್ಧಿಪಡಿಸಿರುವ ಈ ರೋಬೋಟ್ ನೋಡೋದಕ್ಕೆ ಬಲ್ಬ್ಗಳನ್ನು ಜೋಡಿಸಿಟ್ಟ ಯಂತ್ರದಂತಿದೆ. ಈ ರೋಬೋಟ್ ತನ್ನ ಸುತ್ತಮುತ್ತಲಿನ ಬ್ಯಾಕ್ಟೀರಿಯಾ, ವೈರಸ್ಗಳನ್ನು ಕ್ಷಣಮಾತ್ರದಲ್ಲಿ ನಾಶ ಮಾಡುತ್ತದೆ. ಈ ಕಾರಣದಿಂದ ಆಸ್ಪತ್ರೆಯಲ್ಲಿ ರೋಬೋಟ್ ಅವಶ್ಯಕವೆನಿಸಿದೆ.
ಆಸ್ಪತ್ರೆಗಳಲ್ಲಿ ಹಲವು ವಿಧದ ರೋಗಿಗಳು ಬರುತ್ತಾರೆ. ಅದೇ ರೀತಿ ಹಲವು ರೀತಿಯ ಬ್ಯಾಕ್ಟೀರಿಯಾ, ವೈರಸ್ಗಳು ಅಲ್ಲಲ್ಲಿ ಕಾಣಿಸಿಕೊಳ್ಳುತ್ತವೆ. ಸ್ವಚ್ಛತೆಯನ್ನು ಮಾಡಿದರೂ ಅಲ್ಲಲ್ಲಿ ಬ್ಯಾಕ್ಟೀರಿಯಾ, ವೈರಸ್ ಉಳಿದುಕೊಂಡು ಬಿಡುತ್ತವೆ. ಆದರೆ ಈ ರೋಬೋಟ್ ಎಲ್ಲಾ ಕಡೆಗೆ ಹೋಗಿ ಸ್ವಚ್ಛಗೊಳಿಸಬಲ್ಲದು. ಕೋವಿಡ್-19ನ ಅಪಾಯಕಾರಿ ಸನ್ನಿವೇಶದಲ್ಲಿ ಇದು ಆಸ್ಪತ್ರೆಗಳಲ್ಲಿ ಉಪಯೋಗವಾಗಲಿದೆ.
ಈ ರೋಬೋಟ್ಅನ್ನು ರಿಮೋಟ್ ಮೂಲಕ ನಿಯಂತ್ರಿಸಬಹುದು. ಒಂದು ಕೋಣೆಯಲ್ಲಿ ಕುಳಿತು ಬೇರೆ ಕೋಣೆಯಲ್ಲಿ ಕಾರ್ಯನಿರ್ವಹಿಸಬಹುದು. ಆಪರೇಟ್ ಮಾಡುವವರಿಗೆ ರೋಬೋಟ್ನ ಕಾರ್ಯ ವೈಖರಿ ಲೈವ್ ಆಗಿ ನೋಡಲು ಸಾಧ್ಯವಿದೆ. ಅಲ್ಟ್ರಾ ವೈಲೆಟ್ ರೇ ಮೂಲಕ ಬ್ಯಾಕ್ಟೀರಿಯಾ, ವೈರಸ್ಗಳನ್ನು ನಾಶ ಮಾಡುತ್ತದೆ. 140 ಚದರ ಅಡಿಯ ಕೋಣೆಯನ್ನು 5 ನಿಮಿಷದಲ್ಲಿ ಸ್ವಚ್ಛಗೊಳಿಸುವ ಸಾಮರ್ಥ್ಯ ಹೊಂದಿದೆ.
ಕೃತಕ ಬುದ್ಧಿಮತ್ತೆಯನ್ನು ಹೊಂದಿರುವ ಈ ರೋಬೋಟ್ ಗೋಡೆಗಳಿಗೆ ಡಿಕ್ಕಿ ಹೊಡೆಯುವುದನ್ನು ಸ್ವಯಂ ಆಗಿ ತಪ್ಪಿಸಿಕೊಳ್ಳುತ್ತದೆ. ಇದೇ ಮೊದಲ ಬಾರಗೆ ಮಂಗಳೂರಿನ ಆಸ್ಪತ್ರೆಗಳಲ್ಲಿ ಬ್ಯಾಕ್ಟೀರಿಯಾ ಸ್ವಚ್ಛತೆಗಾಗಿ ರೋಬೋಟ್ ಬಳಸಲಾಗುತ್ತಿದೆ. ಕೋವಿಡ್-19 ಆತಂಕದ ಸಂದರ್ಭದಲ್ಲಿ ಈ ರೋಬೋಟ್ಗೆ ಹೆಚ್ಚಿನ ಮಹತ್ವ ಸಿಕ್ಕಿದೆ.