ಪುತ್ತೂರು: ಜನಸ್ನೇಹಿ, ಮಾತೃ ಸ್ನೇಹಿ, ಬಾಲ ಸ್ನೇಹಿಯಾಗಬೇಕೆಂಬ ಸರ್ಕಾರದ ಉದ್ದೇಶ ಈಡೇರಿದೆ. ಸಂವಿಧಾನ ನಮ್ಮ ಹಕ್ಕು. ಕರ್ತವ್ಯ ನಿರ್ವಹಣೆ ಮಾಡಬೇಕಾದರೆ ಎಲ್ಲಾ ಜನರಿಗೂ ನ್ಯಾಯ ಕೊಡುವ ದೃಷ್ಟಿಯಿಂದ ಕಾನೂನು ಇದೆ. ಆದರೆ ಎಲ್ಲವೂ ಕಾನೂನಿನ ಬಲದಲ್ಲೇ ಸರಿ ಮಾಡಲು ಆಗುವುದಿಲ್ಲ. ನೊಂದವರಿಗೆ ಬದುಕು ಕೊಡುವ ಕೆಲಸ ಮಹಿಳಾ ಪೊಲೀಸ್ ಠಾಣೆಯಿಂದ ಆಗಲಿ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ನಿನ್ನೆ ನಡೆದ ಮಕ್ಕಳ ಮತ್ತು ಮಹಿಳೆಯರ ಆಪ್ತ ಸಮಾಲೋಚನಾ ಆಸರೆ ಎಂಬ ಕೊಠಡಿಯಲ್ಲಿ 'ಚಿಗುರು, ಚಿಲಿಪಿಲಿ, ಮಡಿಲು' ವಿಭಾಗ ಉದ್ಘಾಟಿಸಿ ಅವರು ಮಾತನಾಡಿದರು. ರಾಜನಿಲ್ಲದ ರಾಜ್ಯ, ಕಾನೂನು ಇಲ್ಲದ ನ್ಯಾಯಾಲಯ ಇದ್ದಾಗ ಶ್ರೀರಾಮನ ಉದ್ದೇಶದಂತೆ ಅಪರಾಧ ಮುಕ್ತ ಸ್ಟೇಷನ್ ಆಗಬೇಕು. ಇದಕ್ಕಾಗಿ ನಾಗರಿಕರು ಅಪರಾಧ ಮುಕ್ತ ಸಮಾಜದ ಬಗ್ಗೆ ಚಿಂತನೆ ಮಾಡಬೇಕು ಎಂದರು.
ಕುಟುಂಬ ಒಡೆಯುವ ತಂತ್ರ ಬೇಡ: ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಮಾತನಾಡಿ, ನಾನು ಹಿಂದೆಯೂ ಹೇಳಿದಂತೆ ಬಂದ ದೂರುಗಳನ್ನು ತಕ್ಷಣ ದಾಖಲಿಸಿಕೊಳ್ಳದೆ ಅದನ್ನು ಸರಿ ಮಾಡುವ ಚಿಂತನೆ ಮಾಡಬೇಕು. ಗಂಡ-ಹೆಂಡತಿಯನ್ನು ಬೇರೆ ಬೇರೆ ಮಾಡುವ ಬದಲು ಒಟ್ಟು ಮಾಡುವ, ಕುಟುಂಬ ಒಡೆಯುವುದನ್ನು ಬಿಟ್ಟು ಸೇರಿಸುವ ಕೆಲಸ ಪೊಲೀಸ್ ಠಾಣೆಯಿಂದ ಆಗಬೇಕು. ಇಂತಹ ಸಂದರ್ಭದಲ್ಲಿ ಪೊಲೀಸ್ ಭಾಷೆ ಬಿಟ್ಟು, ಮಕ್ಕಳ ಮೇಲಿನ ದೌರ್ಜನ್ಯವನ್ನು ಸೂಕ್ಷ್ಮವಾಗಿ ನೋಡಿಕೊಂಡು ನಿಭಾಯಿಸಬೇಕು. ಗಂಡ-ಹೆಂಡಿರ ಸಮಸ್ಯೆಯಲ್ಲೂ ಇಬ್ಬರಿಂದಲೂ ತಪ್ಪು ಆಗಿರಬಹುದು. ಆದರೆ ಎಲ್ಲರಿಗೂ ರಕ್ಷಣೆ ಸಿಗುವ ಕೆಲಸ ಆಗಲಿ ಎಂದು ಹೇಳಿದರು.