ಹೊಸಮಠ (ದಕ್ಷಿಣ ಕನ್ನಡ) : ಕುಟ್ರುಪ್ಪಾಡಿ ಗ್ರಾ.ಪಂ ವ್ಯಾಪ್ತಿಯ ಬಲ್ಯ ಗ್ರಾಮದ ಹೊಸಮಠ ದೇರಾಜೆ ಕ್ರಾಸ್‌ನ ಸಮೀಪ ರಾಜ್ಯ ಹೆದ್ದಾರಿ ಬದಿಯಲ್ಲಿ ಅನಧಿಕೃತವಾಗಿ ನಿರ್ಮಾಣವಾಗಿದ್ದ ಕಟ್ಟಡದ ಅಂಗಡಿಗಳಿಗೆ ಗ್ರಾಮ ಪಂಚಾಯತ್ ಬೀಗ ಹಾಕಿದೆ.
ಉಪ್ಪಿನಂಗಡಿ–ಕಡಬ ರಾಜ್ಯ ಹೆದ್ದಾರಿಯ ಲೋಕೋಪಯೋಗಿ ವ್ಯಾಪ್ತಿಯಲ್ಲಿ ಅನುಮತಿರಹಿತವಾಗಿ ರಸ್ತೆ ಬದಿಯಲ್ಲಿ ಕಟ್ಟಲಾಗಿದ್ದ ಕಟ್ಟಡದ ಅಂಗಡಿಗಳಿಗೆ ಸಾರ್ವಜನಿಕರ ದೂರುಗಳು ಬಂದಿದ್ವು. ಈ ದೂರುಗಳನ್ನು ಪರಿಶೀಲಿಸಿ ಗ್ರಾ.ಪಂನ ನಿರ್ಣಯದಂತೆ ಕಡಬ ಪೊಲೀಸರ ಸಮ್ಮುಖದಲ್ಲಿ ಅಂಗಡಿಗಳಿಗೆ ಬೀಗ ಜಡಿಯಲಾಗಿದೆ ಎಂದು ಕುಟ್ರುಪ್ಪಾಡಿ ಗ್ರಾ.ಪಂ ಅಭಿವೃದ್ದಿ ಅಧಿಕಾರಿ ವಿಲ್ಪ್ರೆಡ್ ಲಾರೆನ್ಸ್ ರೋಡ್ರಿಗಸ್ ತಿಳಿಸಿದ್ದಾರೆ.
ಸ್ಥಳೀಯ ವ್ಯಕ್ತಿಯೋರ್ವರಿಗೆ ಈ ಕಟ್ಟಡ ಸೇರಿದ್ದು, ಇವರು ವಾಸ್ತವ್ಯದ ಮನೆ ಕಟ್ಟಿದ್ದಲ್ಲದೇ ಸುಮಾರು 16 ಜನರಿಗೆ ಈ ಕಟ್ಟಡದಲ್ಲಿ ಬಾಡಿಗೆಗೆ ಕೊಠಡಿಗಳನ್ನು ನೀಡಿದ್ದರು. ಈ ಕಟ್ಟಡವನ್ನು ತೆರವುಗೊಳಿಸುವಂತೆ ಹಲವು ಬಾರಿ ಕಟ್ಟಡ ಮಾಲೀಕರಿಗೆ ನೋಟಿಸ್ ಕೂಡಾ ನೀಡಲಾಗಿತ್ತು.ಆದರೆ ತೆರವುಗೊಳಿಸುವ ಯಾವುದೇ ಲಕ್ಷಣಗಳು ಕಂಡು ಬಾರದ ಹಿನ್ನೆಲೆಯಲ್ಲಿ ಗ್ರಾ.ಪಂ ಕಾನೂನು ಕ್ರಮಕ್ಕೆ ಮುಂದಾಗಿದೆ.