ಮಂಗಳೂರು: ಕೇಂದ್ರ ಸರ್ಕಾರ 45ಕ್ಕಿಂತ ಮೇಲ್ಪಟ್ಟವರು ಲಸಿಕೆ ತೆಗೆದುಕೊಳ್ಳಬೇಕೆಂದು ಹೇಳಿದಾಗ ಬಹಳಷ್ಟು ಮಂದಿ ಇದು ಬಿಜೆಪಿ ಲಸಿಕೆ ಎಂದು ಟೀಕೆ ಮಾಡಿದರು. ಅಂದು ಲಸಿಕೆಯ ಅರ್ಹತೆಯನ್ನು ಪ್ರಶ್ನಿಸಿದವರೇ ಇಂದು ಲಸಿಕೆ ಸಿಗುತ್ತಿಲ್ಲ ಎಂದು ಕಣ್ಣೀರು ಸುರಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ನಗರದ ಸರ್ಕ್ಯೂಟ್ ಹೌಸ್ನಲ್ಲಿ ಮಾತನಾಡಿದ ಅವರು, ಈ ಸಂದರ್ಭದಲ್ಲಿ ರಾಜಕಾರಣ ಮಾಡಬಾರದಿತ್ತು. ಆದರೆ ಜನರ ದಾರಿ ತಪ್ಪಿಸುವ ಕೆಲಸ ಮಾಡಿ, ಜನರ ಪ್ರಾಣದ ಜೊತೆಗೆ ಚೆಲ್ಲಾಟವಾಡುತ್ತಿದ್ದಾರೆ. ಆದ್ದರಿಂದ ಕೋವಿಡ್ನಿಂದ ಅತೀ ಹೆಚ್ಚು ಜನರು ಮೃತಪಡಲು ಲಸಿಕೆ ಬಂದಾಗ ಜನರ ದಾರಿ ತಪ್ಪಿಸಿದ ಪಾರ್ಟಿಗಳೇ ಕಾರಣ ಎಂದು ಹೇಳಿದರು.
ಅಂದು ಸರ್ಕಾರ ಲಸಿಕೆ ತೆಗೆದುಕೊಳ್ಳಬೇಕು ಎಂದು ಜನರಿಗೆ ಹೇಳಿದಾಗ ಅನುಮಾನ ವ್ಯಕ್ತಪಡಿಸಿದವರು, ಇಂದು ಲಸಿಕೆ ಇಲ್ಲ ಎಂದು ಹೇಳುತ್ತಿದ್ದಾರೆ. ಹಾಗಾದರೆ ನೀವು ಹಿಂದೆ ಯಾಕೆ ಲಸಿಕೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದೀರಿ. ಇಷ್ಟೊಂದು ದೊಡ್ಡ ದೇಶದಲ್ಲಿ, ಅಷ್ಟೇ ಜನಸಂಖ್ಯೆ ಇರುವ ದೇಶದಲ್ಲಿ ಲಸಿಕೆ ತಯಾರಿಸಲು ಅದಕ್ಕೇ ಆದ ವ್ಯವಸ್ಥೆಗಳಿವೆ. ಹಿಂದಿನ ಸರ್ಕಾರದ ಕಾಲಘಟ್ಟದಲ್ಲಿ ಸುದೀರ್ಘವಾದ 65 ವರ್ಷಗಳ ಆನುವಂಶಿಕ ಆಡಳಿತವಿತ್ತು. ಆದರೆ ಅಂದು ದೇಶದಲ್ಲಿ ಎರಡು ಏಮ್ಸ್ಗಳಿದ್ದವು. ಅಟಲ್ ಬಿಹಾರಿ ವಾಜಪೇಯಿಯವರ ಆಡಳಿತ ಕಾಲದಲ್ಲಿ ಆರು ಏಮ್ಸ್ಗಳ ರಚನೆಯಾಯಿತು. ನರೇಂದ್ರ ಮೋದಿ ಸರ್ಕಾರ ಒಂಬತ್ತು ಏಮ್ಸ್ಗಳ ರಚನೆ ಮಾಡಿದೆ ಎಂದರು.
ಕರ್ನಾಟಕ ಮಾತ್ರವಲ್ಲ ರಾಜಸ್ತಾನ, ದೆಹಲಿ, ಮಹಾರಾಷ್ಟ್ರ ರಾಜ್ಯಗಳಲ್ಲಿ ಸೋಂಕಿತರ ಸಂಖ್ಯೆ ನಿಯಂತ್ರಣಕ್ಕೆ ಬರುತ್ತಿದೆ. ಇದೀಗ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಮಿತಿ ಮೀರುತ್ತಿದೆ. ಟೀಕೆ ಮಾಡುವವರು ಕರ್ನಾಟಕಕ್ಕಿಂತಲೂ ಇಲ್ಲಿ ಕೆಟ್ಟದಾಗಿರುವ ಪರಿಸ್ಥಿತಿ ಇರುವುದನ್ನು ಯೋಚನೆ ಮಾಡಲಿ. ದೇಶದಲ್ಲಿ ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಎರಡೂ ಘಟಕಗಳು ಕೆಲಸ ಮಾಡುತ್ತಿವೆ. ಜನವರಿಯಿಂದ ಇಲ್ಲಿಯವರೆಗೆ ದೇಶದಲ್ಲಿ 19 ಕೋಟಿ ಜನರಿಗೆ ಲಸಿಕೆ ನೀಡುವ ಕಾರ್ಯ ಸಂಪೂರ್ಣವಾಗಿದೆ ಎಂದು ಹೇಳಿದರು.
ಆದ್ದರಿಂದ ಇದು ರಾಜಕಾರಣ ಮಾಡುವ ಕಾಲಘಟ್ಟವಲ್ಲ. ಜನರಿಗೆ ಆತ್ಮವಿಶ್ವಾಸ ತುಂಬಿಸುವ ಸಮಯ. ಸಮರೋಪಾದಿಯಲ್ಲಿ ಕೆಲಸಗಳು ನಡೆಯಬೇಕು, ಸರ್ಕಾರ ಅದನ್ನು ಮಾಡುತ್ತಿದೆ. ಈ ಸಂದರ್ಭದಲ್ಲಿ ವ್ಯತ್ಯಾಸಗಳಾದಲ್ಲಿ ಟೀಕೆ ಮಾಡಿ ಕೂರುವ ಬದಲು ಸಲಹೆಗಳನ್ನು ನೀಡಿ ಎಂದು ನಳಿನ್ ವಿರೋಧಪಕ್ಷಗಳಿಗೆ ಮನವಿ ಮಾಡಿದರು.
ಚಾಮರಾಜನಗರದಲ್ಲಿ ನಡೆದ ಘಟನೆಯ ಬಗ್ಗೆ ಸಿಎಂ ತನಿಖೆ ನಡೆಸಲು ತಿಳಿಸಿದ್ದಾರೆ. ಇದಕ್ಕಾಗಿ ಸಮಿತಿ ರಚನೆಯಾಗಿದೆ. ಸಮಿತಿ ನೀಡುವ ತನಿಖೆಯ ವರದಿಯ ಆಧಾರದಲ್ಲಿ ಯಾರೇ ತಪ್ಪಿತಸ್ಥರಾಗಿದ್ದರೂ ಅವರಿಗೆ ಶಿಕ್ಷೆಯಾಗುತ್ತದೆ ಎಂದು ಹೇಳಿದ ನಳಿನ್ ಕುಮಾರ್ ಅವರು, ಸದಾನಂದ ಗೌಡರ ಹೇಳಿಕೆ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಸದಾನಂದ ಗೌಡರು ಯಾವ ಅರ್ಥದಲ್ಲಿ ಹೇಳಿದ್ದಾರೋ ತಿಳಿದಿಲ್ಲ. ಆದರೆ ಎಲ್ಲಾ ಮಂತ್ರಿಗಳು, ಜನಪ್ರತಿನಿಧಿಗಳು ಶ್ರಮಪಟ್ಟು ಕೆಲಸ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಅವಿರತ ಶ್ರಮವಹಿಸುತ್ತಿದೆ ಎಂದು ಹೇಳಿದರು.
ಇದನ್ನೂ ಓದಿ.. ಕೇಂದ್ರದಿಂದ ಎಲ್ಲಾ ಕೊಡ್ತಾ ಇದ್ದೇವೆ, ಪ್ಯಾಕೆಜ್ ಬಗ್ಗೆ ರಾಜ್ಯಾಧ್ಯಕ್ಷ, ಶಾಸಕ, ಮಂತ್ರಿಗಳಲ್ಲಿ ಕೇಳಿ: ಸದಾನಂದಗೌಡರ ಆಡಿಯೋ ವೈರಲ್
ಕೋವಿಡ್ ರೋಗಿಗಳು ದಾಖಲಾದರೆ ಯಾವುದೇ ಖಾಸಗಿ ಆಸ್ಪತ್ರೆಯೂ ಇಷ್ಟೇ ಬಿಲ್ ಮಾಡಬೇಕೆಂದು ಸರ್ಕಾರ ಮಾನದಂಡ ಇರಿಸಿದೆ. ಆ ನಿಯಮಾವಳಿಗಳನ್ನು ಮೀರಿ ಬಿಲ್ ಮಾಡಿದಲ್ಲಿ ಡಿಎಚ್ಒ ಹಾಗೂ ಡಿಸಿಗೆ ದೂರು ನೀಡಿದಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ. ಆಕ್ಸಿಜನ್ ಪೂರೈಕೆ ಮಾಡಲು ಕೇಂದ್ರ ಸರ್ಕಾರ ಮಾನದಂಡಗಳನ್ನು ಇರಿಸಿಕೊಂಡಿದೆ. ರಾಜ್ಯ ಸರ್ಕಾರ ಯಾವ ಜಿಲ್ಲೆಗಳಿಗೆ ಬೇಡಿಕೆ ಹೆಚ್ವಿದೆಯೋ ಅಲ್ಲಿಗೆ ಪೂರೈಕೆ ಮಾಡಬೇಕು. ಅದೇ ರೀತಿ ಕೇಂದ್ರ ಮೊದಲಾಗಿ ಮಹಾರಾಷ್ಟ್ರ, ರಾಜಸ್ತಾನಗಳಿಗೆ ಆಕ್ಸಿಜನ್ ಪೂರೈಕೆ ಮಾಡಿದೆ. ಅದೇ ರೀತಿ ಕರ್ನಾಟಕಕ್ಕೂ ಆಕ್ಸಿಜನ್ ಪೂರೈಕೆ ಆಗಲಿದೆ. ಸರ್ಕಾರ ಎಲ್ಲವನ್ನೂ ಗಮನಿಸುತ್ತಿದ್ದು, ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರ ಪ್ಯಾಕೇಜ್ ಕೊಡಬಹುದು ಎಂದು ಕಟೀಲ್ ಹೇಳಿದರು.