ಮಂಗಳೂರು: ರಾಜ್ಯದ ಜನತೆ ಸ್ಥಿರ, ಬಡವರ ಪರವಾದ, ಜನಪರ ಸರ್ಕಾರವನ್ನು ಅಪೇಕ್ಷೆ ಪಟ್ಟಿದ್ದರು. ಇವತ್ತು 12 ಸ್ಥಾನಗಳನ್ನು ಬಿಜೆಪಿಗೆ ಕೊಡುವುದರ ಮೂಲಕ ಬಹುದೊಡ್ಡ ಅವಕಾಶ ನೀಡಿದ್ದಾರೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಗೆಲುವಿನ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಂದಿನ ಮೂರುವರೆ ವರ್ಷಗಳ ಕಾಲ ಸ್ಥಿರ, ಅಭಿವೃದ್ಧಿ ಪರ ಸರ್ಕಾರವನ್ನು ನಾವು ನಡೆಸುತ್ತೇವೆ ಎಂದರು. ಉಪಚುನಾವಣೆಯಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹಾಗೂ ಸಿಎಂ ಯಡಿಯೂರಪ್ಪನವರು 15 ಕ್ಕೆ 15 ಸ್ಥಾನಗಳನ್ನು ಗೆಲ್ಲುವ ಭರವಸೆ ವ್ಯಕ್ತಪಡಿಸಿದ್ದರು. ಆದ್ರೆ ಜನರು 12 ಸ್ಥಾನಗಳನ್ನು ನೀಡಿದ್ದಕ್ಕೆ ಸಂತಸವಿದೆ ಎಂದರು.
ಇದೇ ವೇಳೆ ಮಾತನಾಡಿದ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್, ರಾಜ್ಯದ ಜನತೆ ಯಡಿಯೂರಪ್ಪರ ಸರ್ಕಾರವನ್ನು ಒಪ್ಪಿಕೊಂಡಿದ್ದಾರೆ ಎನ್ನುವುದಕ್ಕೆ ಇಂದಿನ ಫಲಿತಾಂಶವೇ ಸಾಕ್ಷಿ. ಫಲಿತಾಂಶಕ್ಕಿಂತ ಮುಂಚೆ ನಮ್ಮ ನಾಯಕರು ಬಹುಮತದ ಮಾತುಗಳನ್ನು ಆಡುವಾಗ ಕಾಂಗ್ರೆಸ್, ಜೆಡಿಎಸ್ ನಾಯಕರು ಲೇವಡಿ ಮಾಡುತ್ತಿದ್ದರು. ಆದ್ರೆ ಮತದಾರರು ಬಿಜೆಪಿಗೆ ಆಶೀರ್ವದಿಸಿದ್ದಾರೆ. ಆದ್ದರಿಂದ ಎಲ್ಲಾ ಮತದಾರರನ್ನು ಹಾಗೂ ಗೆದ್ದ ಅಭ್ಯರ್ಥಿಗಳನ್ನು ಅಭಿನಂದಿಸುತ್ತೇನೆ ಎಂದರು.