ಮಂಗಳೂರು: ನಾಯಕರಾದವರು ಏನು ಬೇಕಾದವರು ಮಾಡಬಹುದು ಎಂಬ ರೀತಿಯಲ್ಲಿ ರಾಜಕಾರಣಿಗಳು ಪ್ರಜಾಪ್ರಭುತ್ವವನ್ನು ದುರುಪಯೋಗಪಡಿಸುತ್ತಿದ್ದಾರೆ ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ರಾಜ್ಯಾಧ್ಯಕ್ಷೆ ವಿ.ಗೀತಾ ಹೇಳಿದರು.
ನಗರದ ಎನ್.ಜಿ.ಒ ಸಭಾಂಗಣದಲ್ಲಿ ನಡೆದ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಸಮ್ಮೇಳನವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಮಹಿಳೆಯರ ಮೇಲಿನ ದೌರ್ಜನ್ಯವನ್ನು ವಿಚಾರಿಸಬೇಕಾದ ಶಾಸಕರು ರೆಸಾರ್ಟ್ ನಲ್ಲಿಹೋಗಿ ಕುಳಿತಿದ್ದಾರೆ. ರಾಜಕೀಯ ನಾಯಕರು ಏನು ಬೇಕಾದರೂ ಮಾಡಬಹುದು ಎಂಬ ರೀತಿಯಲ್ಲಿ ಪ್ರಜಾಪ್ರಭುತ್ವವನ್ನು ದುರುಪಯೋಗ ಮಾಡುವಂತ ಕೆಲಸ ಮಾಡುತ್ತಿದ್ದಾರೆ. ಒಂದು ವಾರದಿಂದ ಜನಪ್ರತಿನಿಧಿಗಳು ಗದ್ದಲ ನಡೆಸುತ್ತಿದ್ದರೂ ಯಾವೊಬ್ಬ ಶಾಸಕನಾದರು ರಾಜ್ಯದಲ್ಲಿ ನಡೆದ ಮಹಿಳೆಯರ ಅತ್ಯಾಚಾರ ಘಟನೆಗೆ ಸಂಬಂಧಿಸಿದಂತೆ ಧ್ವನಿಯೆತ್ತಿದ್ದಾರ?. ಈ ಬಗ್ಗೆ ಸರಕಾರ ಏನೂ ಮಾಡಿಲ್ಲ ನಾನು ಅದಕ್ಕಾಗಿ ರಾಜಿನಾಮೆ ನೀಡಲಿದ್ದೇನೆ ಎಂದು ಯಾರಾದರು ಹೇಳಿದ್ದಾರಾ ಎಂದು ಪ್ರಶ್ನಿಸಿದರು.
ಈ ದೇಶವನ್ನು ಆಳ್ವಿಕೆ ಮಾಡುವುದು ನರೇಂದ್ರ ಮೋದಿಯವರೆಂಬ ಬೊಂಬೆ. ಈ ಬೊಂಬೆಯನ್ನು ಎದುರಿಟ್ಟುಕೊಂಡು ಬಂಡವಾಳಶಾಹಿಗಳು ಅಧಿಕಾರ ನಡೆಸುತ್ತಿದ್ದಾರೆ. ಹಾಗಾಗಿ ಮೋದಿಯವರು ಮಹಿಳೆಯರು, ಕೂಲಿಕಾರರು, ರೈತರು, ಯುವಜನರ ಪರವಾಗಿ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಮೊನ್ನೆಯ ಬಜೆಟ್ ನಲ್ಲಿ ನಿರ್ಧಾರವಾಗಿದೆ ಎಂದು ಹೇಳಿದರು.
ಭೋಲೋ ಭಾರತ್ ಮಾತಾ ಕೀ ಜೈ ಎನ್ನುತ್ತಾರೆ, ಭಾರತ ಮಾತೆಗೆ ಜೈ ಎಂದು ಹೇಳುತ್ತಾರೆ, ಮೂರು ದಿನಕ್ಕೊಮ್ಮೆ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ತಾಯಿ ಕಾಲಿಗೆರಗುತ್ತಾರೆ. ಆದರೆ ನಿಮ್ಮ ತಾಯಿ ವಯಸ್ಸಿನ ಎಷ್ಟೋ ಮಹಿಳೆಯರು ಒಂದು ಹೊತ್ತಿನ ಊಟಕ್ಕೂ ಗತಿಯಿಲ್ಲದೆ ಬೀದಿಗೆ ಬಿದ್ದಿದ್ದಾರೆ. ದೇಶದಲ್ಲಿ ಎಷ್ಟೋ ಮಹಿಳೆಯರಿಗೆ ಉಡಲು ಬಟ್ಟೆ ಕೊಳ್ಳುವ ಶಕ್ತಿಯಿಲ್ಲ. ಅಂಗನವಾಡಿ ಕಾರ್ಯಕರ್ತೆಯರಿಗೆ ಕನಿಷ್ಠ ವೇತನ ಸಿಗುತ್ತಿಲ್ಲ. ಬೀಡಿ ಕಟ್ಟುವ ಹೆಣ್ಣು ಮಕ್ಕಳಿಗೆ ಸರಿಯಾದ ಸೌಲಭ್ಯಗಳು ಸಿಗುತ್ತಿಲ್ಲ. ಬಿಸಿಯೂಟದಲ್ಲಿ ಕೆಲಸ ಮಾಡುವ ಹೆಂಗಸರಿಗೆ ಸಂಬಳ ದೊರೆಯುತ್ತಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ದ ವಾಗ್ದಾಳಿ ನಡೆಸಿದರು.
ಮೂರು ಹೊತ್ತು ಪೌಷ್ಟಿಕಾಂಶವುಳ್ಳ ಆಹಾರ ಸೇವನೆ ಮಾಡಲಾಗದ ಎಷ್ಟೋ ಮಂದಿ ಹೆಂಗಸರು ಈ ದೇಶದಲ್ಲಿದ್ದಾರೆ. ಅದನ್ನೆಲ್ಲಾ ಕೊಡದೆ, ಆ ಮಾತೆಯರು ಭದ್ರತೆಯಿಂದ ಜೀವಿಸಲು ಅವಕಾಶ ನೀಡದೆ ಭೋಲೋ ಭಾರತ್ ಮಾತಾ ಕೀ ಜೈ ಅನ್ನುತ್ತೀರಲ್ಲ. ದೇಶ ಎಂದರೆ ಮಣ್ಣುಗಡ್ಡೆಯಾ ಎಂದು ಛೇಡಿಸಿದರು.