ಮಂಗಳೂರು: ಇಂದು ಬೆಳಗ್ಗೆ ನಾಪತ್ತೆಯಾಗಿದ್ದ 11 ವರ್ಷದ ಬಾಲಕಿಯ ಮೃತದೇಹ ಮನೆ ಸಮೀಪದ ನದಿಯಲ್ಲಿ ಪತ್ತೆಯಾಗಿರುವ ಘಟನೆ ನಡೆದಿದೆ. ಕುದ್ರೋಳಿ ಹೈದರಾಲಿ ರಸ್ತೆಯ ನಿವಾಸಿ ಸಲಾಂ ಎಂಬವರ ಪುತ್ರಿ ಮುಫೀದಾ (11) ಮೃತಪಟ್ಟ ಬಾಲಕಿ.
ಬಾಲಕಿ ಮುಫೀದಾ ಭಾನುವಾರ ಬೆಳಗ್ಗೆ 8 ಗಂಟೆಯ ಬಳಿಕ ಮನೆಯಿಂದ ನಾಪತ್ತೆಯಾಗಿದ್ದಳು. ಮನೆಮಂದಿ ಆಕೆಗಾಗಿ ಎಲ್ಲಾ ಕಡೆಗಳಲ್ಲೂ ಹುಡುಕಾಟ ನಡೆಸಿದ್ದರು. ಆದರೆ ಆಕೆ ಎಲ್ಲೂ ಪತ್ತೆಯಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಮನೆ ಪಕ್ಕದ ಸಿಸಿಟಿವಿಯನ್ನು ಪರಿಶೀಲನೆ ನಡೆಸಿದ್ದಾರೆ.
ಆಕೆ ಮನೆಯಿಂದ ಸುಮಾರು 200 ಮೀಟರ್ ದೂರದಲ್ಲಿರುವ ನದಿ ಕಡೆಗೆ ಹೋಗಿರುವುದಾಗಿ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಈಜುಪಟು ಯುವಕರು ನದಿಯಲ್ಲಿ ಹುಡುಕಾಟ ನಡೆಸಿದಾಗ ಬಾಲಕಿಯ ಮೃತದೇಹ ಪತ್ತೆಯಾಗಿದೆ.
ಮುಫೀದಾ ವಿಶೇಷಚೇತನಳಾಗಿದ್ದು, ಪೋಷಕರ ಗಮನಕ್ಕೆ ಬಾರದೆ ಮನೆಯಿಂದ ಹೊರಬಂದಿದ್ದಾಳೆ ಎನ್ನಲಾಗಿದೆ. ಈ ಬಗ್ಗೆ ಬಂದರು ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಮೃತದೇಹವನ್ನು ವೆನ್ಲಾಕ್ ಆಸ್ಪತ್ರೆಗೆ ರವಾನಿಸಿದ್ದಾರೆ.