ಬಂಟ್ವಾಳ: ತಾಲೂಕಿನ ಕರೋಪಾಡಿ ಗ್ರಾಮದ ಒಡಿಯೂರು ಶಾಲೆಯಲ್ಲಿ 8ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಗಣೇಶ ಎಂಬಾತ ನಿನ್ನೆ ನಾಪತ್ತೆಯಾಗಿದ್ದು ಇಂದು ಮಂಗಳೂರಿನಲ್ಲಿ ಪತ್ತೆಯಾಗಿದ್ದಾನೆ.
ಮಂಗಳೂರಿನಲ್ಲಿ ಗಣೇಶ್ ಪತ್ತೆಯಾಗಿದ್ದು, ಪೊಲೀಸರು ಆತನನ್ನು ವಿಟ್ಲ ಠಾಣೆಗೆ ಕರೆದೊಯ್ದು ಬುದ್ಧಿವಾದ ಹೇಳಿ ನಂತರ ಪೋಷಕರಿಗೆ ಹಸ್ತಾಂತರಿಸಿದ್ದಾರೆ.
ಈ ಬಾಲಕ ಕರೋಪ್ಪಾಡಿ ಗ್ರಾಮದ ಹನುಮಂತ ಎಸ್ ಸುಡುಗಾಡಸಿದ್ದರವರ ಪುತ್ರ. ಹನುಮಂತ ಕಳೆದ 8 ವರ್ಷಗಳಿಂದ ಕರೋಪ್ಪಾಡಿ ಗ್ರಾಮದ ಒಡಿಯೂರು ದೇವಸ್ಥಾನದ ಬಳಿ ತನ್ನ ಹೆಂಡತಿ ಮತ್ತು ಮೂವರು ಮಕ್ಕಳೊಂದಿಗೆ ವಾಸವಾಗಿದ್ದು, ಮೊದಲನೇ ಮಗ ಗಣೇಶ (15) ಒಡಿಯೂರು ಶಾಲೆಯಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡಿಕೊಂಡಿದ್ದ.
ಈ ಸುದ್ದಿಯನ್ನೂ ಓದಿ: ಒಡಿಯೂರು : 8ನೇ ತರಗತಿಯ ಶಾಲಾ ಬಾಲಕ ನಾಪತ್ತೆ
ಕೊರೊನಾ ಕಾರಣದಿಂದಾಗಿ ಶಾಲೆಗೆ ರಜೆ ಇದ್ದುದರಿಂದ ಮನೆಯಲ್ಲಿದ್ದ ಗಣೇಶ ಆನ್ಲೈನ್ ತರಗತಿಗಾಗಿ ತನ್ನ ತಂದೆಯ ಬಳಿ ಇದ್ದ ಮೊಬೈಲ್ ಫೋನ್ ಪಡೆದು ಪಬ್ ಜೀ ಗೇಮ್ ಆಡುತ್ತಿದ್ದ. ಅದನ್ನು ಗಮನಿಸಿದ ತಂದೆ ಗೇಮ್ ಆಡಬೇಡ ಓದಿಕೋ ಎಂದು ಹಲವಾರು ಬಾರಿ ಬುದ್ಧಿವಾದ ಹೇಳಿದ್ದರು. ಆದರೂ ಮೊಬೈಲ್ ಗೇಮ್ ಗೀಳು ಬಿಡದ ಮಗನನ್ನು ತಂದೆಯು ಶಾಲೆಗೆ ಕರೆದುಕೊಂಡು ಹೋಗಿ ಈ ವಿಚಾರವನ್ನು ಶಿಕ್ಷಕರಿಗೆ ತಿಳಿಸಿದ್ದ. ಶಿಕ್ಷಕರು ಗಣೇಶನಿಗೆ ಬುದ್ಧಿವಾದ ಹೇಳಿ ಸೋಮವಾರ ಶಾಲೆಗೆ ಬರುವಂತೆ ಹೇಳಿ ಕಳುಹಿಸಿದ್ದರು.
ಹನುಮಂತ ಕೆಲಸಕ್ಕೆ ಹೋಗಿ ಮಧ್ಯಾಹ್ನ ಊಟಕ್ಕೆ ಮನೆಗೆ ಬಂದಾಗ ಮಗ ಗಣೇಶ ಮನೆಯಲ್ಲಿ ಇರಲಿಲ್ಲ. ಈ ಕುರಿತು ವಿಟ್ಲ ಠಾಣೆಗೆ ದೂರು ನೀಡಲಾಗಿತ್ತು. ಸದ್ಯ ಬಾಲಕ ಮಂಗಳೂರಿನಲ್ಲಿ ಪತ್ತೆಯಾಗಿದ್ದು, ವಿಟ್ಲ ಪೊಲೀಸರು ಸುರಕ್ಷಿತವಾಗಿ ಬಾಲಕನನ್ನು ಪೋಷಕರಿಗೆ ಒಪ್ಪಿಸಿದ್ದಾರೆ.