ಮಂಗಳೂರು: ನಗರದಲ್ಲಿ ಗೋಡೆ ಬರಹ ಪ್ರಕರಣದಲ್ಲಿ ಬಂಧಿತರು ಟೆರರಿಸ್ಟ್ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವ ಬಗ್ಗೆ ತನಿಖೆ ಮುಂದುವರೆದಿದೆ ಎಂದು ನಗರ ಪೊಲೀಸ್ ಕಮಿಷನರ್ ವಿಕಾಸ್ ಕುಮಾರ್ ತಿಳಿಸಿದ್ದಾರೆ.
ಮಂಗಳೂರು ಗೋಡೆ ಬರಹ ಪ್ರಕರಣ
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಂಧಿತರು ಗೋಡೆ ಬರಹ ಬರೆದ ಸಂದರ್ಭದಲ್ಲಿ ಭಯೋತ್ಪಾದಕ ಸಂಘಟನೆಯ ಉಲ್ಲೇಖ ಮಾಡಿದ್ದರು. ಅದರ ಹಿನ್ನೆಲೆ ನಮ್ಮ ಮೊದಲ ತನಿಖೆಯನ್ನು ಆ ಬಗ್ಗೆ ಮಾಡುತ್ತಿದ್ದೇವೆ. ಈ ಬಗ್ಗೆ ದೃಢಗೊಳ್ಳಬೇಕಾಗಿದ್ದು ತನಿಖೆ ಮುಂದುವರೆಯುತ್ತಿದೆ ಎಂದು ತಿಳಿಸಿದರು.
ಬಂಧಿತ ಆರೋಪಿಗಳನ್ನು ಎನ್ಐಎ ತನಿಖೆ ಮಾಡುವ ಬಗ್ಗೆ ನಿರ್ಧರಿಸಿದರೆ ನಾವು ಸಹಕಾರ ನೀಡುತ್ತೇವೆ. ಈ ಬಗ್ಗೆ ಈವರೆಗೆ ಯಾವುದೇ ಮಾಹಿತಿ ಇಲ್ಲ ಎಂದು ತಿಳಿಸಿದರು.
ಓದಿ: ಅಕ್ರಮ ಮರಳು ಸಾಗಣೆ: ವಾಹನಗಳನ್ನು ವಶಕ್ಕೆ ಪಡೆದ ರಾಣೆಬೆನ್ನೂರು ಪೊಲೀಸರು
ಇನ್ನೋರ್ವನಿಗಾಗಿ ಮುಂದುವರೆದಿದೆ ಶೋಧ: ಗೋಡೆ ಬರಹ ಪ್ರಕರಣದಲ್ಲಿ ಈಗಾಗಲೇ ಮೂವರು ಬಂಧಿತರಾಗಿದ್ದಾರೆ. ತೀರ್ಥಹಳ್ಳಿ ತಾಲೂಕಿನ ಮೊಹಮ್ಮದ್ ಶಾಕೀರ್, ಮಾಝ್ ಮುನೀರ್ ಅಹ್ಮದ್ ಮತ್ತು ಸಾದತ್ ಬಂಧಿತರಾಗಿದ್ದಾರೆ. ಇದೇ ಪ್ರಕರಣದಲ್ಲಿ ಭಾಗಿಯಾಗಿರುವ ಇನ್ನೋರ್ವ ಆರೋಪಿಗಾಗಿ ಪೊಲೀಸರ ಶೋಧ ಕಾರ್ಯ ಮುಂದುವರೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಸಾಕ್ಷ್ಯ ಶೋಧಿಸಲಾಗುತ್ತಿದ್ದು, ಪ್ರತ್ಯಕ್ಷ ಸಾಕ್ಷಿ ಇಲ್ಲದಿದ್ದರೆ ತಾಂತ್ರಿಕ ಸಾಕ್ಷ್ಯಗಳನ್ನು ಕಲೆ ಹಾಕಲಾಗುತ್ತದೆ ಎಂದರು.
ಮಂಗಳೂರಿನಲ್ಲಿದೆ 18,500 ಸಿಸಿಟಿವಿ, ಕಾರ್ಯನಿರ್ವಹಿಸದ ಸಿಸಿಟಿವಿ ದುರಸ್ತಿ: ನಗರದಲ್ಲಿ ಸರಿಯಾಗಿ ಕಾರ್ಯನಿರ್ವಹಿಸದ ಸಿಸಿಟಿವಿಗಳನ್ನು ದುರಸ್ತಿ ಮಾಡಲು ಸೂಚಿಸಲಾಗಿದ್ದು, ಇನ್ನೊಂದು ತಿಂಗಳಲ್ಲಿ ಅದು ಸರಿಯಾಗಲಿದೆ. ನಗರದಲ್ಲಿ 18,500 ಸಿಸಿಟಿವಿಗಳಿದ್ದು ಇವೆಲ್ಲವೂ ಪಬ್ಲಿಕ್ ಸೇಪ್ಟಿ ಆ್ಯಕ್ಡ್ ನಡಿ ಬರುವುದರಿಂದ ಅವುಗಳನ್ನು ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.