ಮಂಗಳೂರು: ಲಂಚ ಪಡೆದ ಆರೋಪದಡಿ ಭ್ರಷ್ಟಾಚಾರ ನಿಗ್ರಹದಳದ ಅಧಿಕಾರಿಗಳಿಂದ ಬಂಧಿಸಲ್ಪಟ್ಟು ನ್ಯಾಯಾಂಗ ಬಂಧನದಲ್ಲಿರುವ ತಹಸೀಲ್ದಾರ್ ಡಾ.ಪ್ರದೀಪ್ ಕುಮಾರ್ ಅವರ ಜಾಮೀನು ಅರ್ಜಿಯನ್ನುಮಂಗಳೂರಿನ ನ್ಯಾಯಾಲಯ ವಜಾಗೊಳಿಸಿದೆ.
ಪುತ್ತೂರು ತಾಲೂಕಿನ ತಹಸೀಲ್ದಾರ್ ಆಗಿರುವ ಆರೋಪಿ ಡಾ.ಪ್ರದೀಪ್ ಕುಮಾರ್ ಪುತ್ತೂರಿನ ಪೈ ಕೇಟರರ್ಸ್ ನ ದಿನೇಶ್ ಪೈ ಯವರಿಂದ 1,25,000 ರೂ. ಲಂಚ ಸ್ವೀಕರಿಸುತ್ತಿದ್ದಾಗ ಮಂಗಳೂರಿನ ಭ್ರಷ್ಟಾಚಾರ ನಿಗ್ರಹದಳದ ಎಸ್ಪಿ ಉಮಾ ಪ್ರಶಾಂತ್ ಮತ್ತು ಇನ್ಸ್ ಪೆಕ್ಟರ್ ಯೋಗೀಶ್ ಕುಮಾರ್ ತಂಡ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದರು.
ಲೋಕಸಭಾ ಚುನಾವಣೆಯ ಸಂದರ್ಭ ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿ ನಡೆದ ಮಸ್ಟರಿಂಗ್, ಡಿ ಮಸ್ಟರಿಂಗ್ ಮತ್ತು ತರಬೇತಿ ಕಾರ್ಯದಲ್ಲಿ ಭಾಗವಹಿಸಿದ್ದ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಒಟ್ಟು 19 ದಿನಗಳ ಕಾಲ ಹಗಲು, ರಾತ್ರಿ ಊಟ ಹಾಗೂ ಉಪಹಾರವನ್ನು ಪರ್ಲಡ್ಕ ಪೈ ಕೆಟರರ್ಸ್ ಮಾಲಕ ದಿನೇಶ್ ಪೈಯವರು ಪೂರೈಸಿದ್ದರು. ಆದ್ದರಿಂದ ದಿನೇಶ್ ಪೈಯವರಿಗೆ ಸರಕಾರದಿಂದ 9.39 ಲಕ್ಷ ರೂ. ಮಂಜೂರು ಮಾಡಲು ಒಮ್ಮೆ 99 ಸಾವಿರ ರೂ. ಮತ್ತು ಇನ್ನೊಮ್ಮೆ 1 ಲಕ್ಷದ 25 ಸಾವಿರ ರೂ. ಲಂಚ ಪಡೆದ ಪ್ರಕರಣದಡಿ ಬಂಧಿತರಾಗಿ ಇದೀಗ ಸೆರೆಮನೆಯಲ್ಲಿರುವ ಡಾ.ಪ್ರದೀಪ್ ಕುಮಾರ್ ಪರ ಜಾಮೀನು ಅರ್ಜಿ ಸಲ್ಲಿಸಲಾಗಿತ್ತು.
ಆದರೆ ಭ್ರಷ್ಟಾಚಾರ ನಿಗ್ರಹದಳದ ಪರ ವಕೀಲ ವಿಶೇಷ ಸರಕಾರಿ ಅಭಿಯೋಜಕ ಕೆ. ಎಸ್.ಎನ್. ರಾಜೇಶ್ ರವರು ಡಾ. ಪ್ರದೀಪ್ ಕುಮಾರ್‌ರವರಿಗೆ ಜಾಮೀನು ನೀಡುವುದಕ್ಕೆ ಪ್ರಬಲ ಆಕ್ಷೇಪ ವ್ಯಕ್ತಪಡಿಸಿದ್ದರು. ವಕೀಲರ ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶ ಮುರಳೀಧರ ಪೈಯವರು ಇಂದು ಆದೇಶ ಪ್ರಕಟಿಸಿದ್ದು ಡಾ. ಪ್ರದೀಪ್ ಜಾಮೀನು ಅರ್ಜಿಯನ್ನು ವಜಾಗೊಳಿಸಿದ್ದಾರೆ.