ಬಂಟ್ವಾಳ: ಕೊರೊನಾಗೆ ಮೃತಪಟ್ಟ ಬಂಟ್ವಾಳದ ಮಹಿಳೆಗೆ ಕೊರೊನಾ ಬಂದಿದ್ದಾದರೂ ಹೇಗೆ ಎಂಬ ಮಾಹಿತಿಯನ್ನು ತಾಲೂಕು ಆಡಳಿತ ಇದೀಗ ಕಲೆ ಹಾಕುತ್ತಿದೆ.
ಪಟ್ವಣವನ್ನೀಗ ಸಂಪೂರ್ಣ ಬಂದ್ ಮಾಡಲಾಗಿದ್ದು, ವಿಶೇಷವಾಗಿ ಸೋಂಕಿತ ಮಹಿಳೆಯ ಮನೆಯ 100 ಮೀಟರ್ ಸುತ್ತಲೂ ಯಾರೂ ಪ್ರವೇಶಿಸದಂತೆ ರಸ್ತೆಯನ್ನು ಮಣ್ಣಿನ ದಿಬ್ಬ ಹಾಕಿ ಬ್ಲಾಕ್ ಮಾಡಲಾಗಿದೆ. ಇನ್ನು 1 ಕಿ.ಮೀ. ವ್ಯಾಪ್ತಿಗೆ ಒಳಪಡುವ ಸುಮಾರು 750ರಷ್ಟು ಮನೆಗಳ ಸದಸ್ಯರೆಲ್ಲರ ಆರೋಗ್ಯ ತಪಾಸಣೆ, ಅಗತ್ಯ ಬಿದ್ದರೆ ಕೋವಿಡ್ ತಪಾಸಣೆಯ ಕಾರ್ಯವನ್ನು ಆರೋಗ್ಯಾಧಿಕಾರಿ ಡಾ. ದೀಪಾ ಪ್ರಭು ನೇತೃತ್ವದಲ್ಲಿ ಆರೋಗ್ಯ ಸಹಾಯಕಿಯರು, ಆಶಾ ಕಾರ್ಯಕರ್ತೆಯರ ತಂಡ ನಡೆಸುತ್ತಿದೆ.
ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್. ನೇತೃತ್ವದಲ್ಲಿ ಪುರಸಭೆ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ ಮತ್ತು ತಂಡ ಹಾಗೂ ಡಿವೈಎಸ್ಪಿ ವೆಲಂಟೈನ್ ಡಿಸೋಜ ನೇತೃತ್ವದ ಪೊಲೀಸರ ತಂಡ ಇಡೀ ನಗರದ ಆಗುಹೋಗುಗಳ ಮೇಲೆ ಕಣ್ಣಿಟ್ಟಿದ್ದಾರೆ. ಇನ್ನು ಮಹಿಳೆ ಮೃತಪಟ್ಟ ಹಿನ್ನೆಲೆಯಲ್ಲಿ ಒಟ್ಟು 34 ಮಂದಿಯನ್ನು ಕ್ವಾರಂಟೈನ್ನಲ್ಲಿಡಲಾಗಿದೆ. ಮಹಿಳೆಯ ಮನೆಯವರು, ಸಂಬಂಧಿಕರು ಸೇರಿ 28 ಮಂದಿ ಹಾಗೂ ಚಿಕಿತ್ಸೆ ನೀಡಿದ ವೈದ್ಯರು, ಪ್ಯಾರಾಮೆಡಿಕಲ್ ಸಿಬ್ಬಂದಿ ಸಹಿತ 6 ಮಂದಿ ಕ್ವಾರಂಟೈನ್ನಲ್ಲಿದ್ದಾರೆ.
ಪ್ರತಿ 2 ದಿನಕ್ಕೊಮ್ಮೆ ಶಾಸಕ ರಾಜೇಶ್ ನಾಯ್ಕ್ ಗ್ರಾ.ಪಂ. ಪಿಡಿಒಗಳ ಜತೆ ವಿಡಿಯೋ ಕಾನ್ಫರೆನ್ಸ್ ನಡೆಸಿ ಗ್ರಾಮೀಣ ಭಾಗದ ಸ್ಥಿತಿಯನ್ನು ತಿಳಿದುಕೊಳ್ಳಲಿದ್ದಾರೆ. ಅದೇ ರೀತಿ ಆಶಾ ಕಾರ್ಯಕರ್ತೆಯರು ಪ್ರತಿ ಮನೆ, ವ್ಯಕ್ತಿಗಳ ಸರ್ವೆ ನಡೆಸುತ್ತಿದ್ದಾರೆ.