ಮಂಗಳೂರು: ಸಮುದ್ರ ವಿಹಾರ ಎಷ್ಟು ಆಹ್ಲಾದಕರವೋ, ಅಷ್ಟೇ ಅಪಾಯಕಾರಿ. ಭಾರತದಲ್ಲಿ ವರ್ಷದಲ್ಲಿ ಲಕ್ಷಕ್ಕೂ ಹೆಚ್ಚು ಜನರು ತೆರೆಯ ಸುಳಿಗೆ ಸಿಕ್ಕಿ ಮೃತಪಡುತ್ತಿದ್ದಾರೆ. ಅದಕ್ಕಾಗಿಯೇ ಏಳೆಂಟು ಯುವಕರ ತಂಡವೊಂದು ನಗರದ ತಣ್ಣೀರುಬಾವಿ ಬೀಚ್ ನಲ್ಲಿ ಸರ್ಫ್ ಲೈಫ್ ಸೇವಿಂಗ್ ತರಬೇತಿ ನೀಡುತ್ತಿದೆ.
ಸರ್ಫ್ ಲೈಫ್ ಸೇವಿಂಗ್ ಇಂಡಿಯಾದ ಯುವಕರ ತಂಡ ಪುಣೆಯ ರಾಷ್ಟ್ರೀಯ ರಕ್ಷಣಾ ಸಂಘಟನೆಯಿಂದ(ಆರ್ ಎಲ್ಎಸ್ಎಸ್ಐ) ಅಧಿಕೃತ ಅನುಮತಿ ಪಡೆದು ಪ್ರತೀ ರವಿವಾರ ಬೆಳಗ್ಗೆ ತಣ್ಣೀರುಬಾವಿ ಬೀಚ್ ನಲ್ಲಿ ಜೀವರಕ್ಷಣೆಯ ತರಬೇತಿ ನೀಡುತ್ತಿದೆ. ಬೆಳಗ್ಗೆ 7.30 ರಿಂದ 10ರವರೆಗೆ ಮಕ್ಕಳು, ಯುವಕರು, ಹಿರಿಯರೂ ತರಬೇತಿ ಪಡೆಯುತ್ತಿದ್ದಾರೆ. ಪಾರ್ಥ ವಾರಣಾಸಿ, ನಿರೂಪ್ ಜಿ.ಆರ್., ರೋಹಿತ್ ಪ್ರಕಾಶ್, ಯಜ್ಞೇಶ್ ಬೇಂಗ್ರೆ, ಶ್ರೀಕೃಷ್ಣ ವಸಂತ್, ಅನೀಶ್, ಸ್ವೀಕೃತ್ ಆನಂದ್, ರಾಯ್ ಸ್ಟನ್ ರೋಡ್ರಿಗಸ್, ತ್ರಿಶೂಲ್, ಸಚಿನ್ ಮುಂತಾದವರು ಇಲ್ಲಿ ತರಬೇತಿ ನೀಡುತ್ತಾರೆ. ಪಾರ್ಥ ವಾರಣಾಸಿ, ನಿರೂಪ್ ಜಿ.ಆರ್., ರೋಹಿತ್ ಪ್ರಕಾಶ್, ಯಜ್ಞೇಶ್ ಬೇಂಗ್ರೆ, ಶ್ರೀಕೃಷ್ಣ ವಸಂತ್ ಭಾರತದ ಅತ್ಯುನ್ನತ ಲೆವೆಲ್ ತ್ರೀ ತರಬೇತಿ ಪಡೆದಿದ್ದಾರೆ. ಅದರಲ್ಲೂ ನಿರೂಪ್ ಜಿ.ಆರ್. ಹಾಗೂ ಶ್ರೀಕೃಷ್ಣ ವಸಂತ್ ಆಸ್ಟ್ರೇಲಿಯಾದಲ್ಲಿ ಸರ್ಫ್ ಲೈಫ್ ಸೇವಿಂಗ್ ನ ಅತ್ಯಂತ ಕಠಿಣ ಮೆಡಾಲಿಯನ್ ತರಬೇತಿ ಪಡೆದಿದ್ದಾರೆ.
ಸರ್ಫ್ ಲೈಫ್ ಸೇವಿಂಗ್ ಗೆ ಆಸ್ಟ್ರೇಲಿಯಾ ಪ್ರೇರಣೆ: ಆಸ್ಟ್ರೇಲಿಯಾದಲ್ಲಿ ಸರ್ಫ್ ಲೈಫ್ ಸೇವಿಂಗ್ ಗೆ ಆಸ್ಟ್ರೇಲಿಯಾ ಎಂಬ ತರಬೇತಿಯು ನೂರು ವರ್ಷಗಳ ಹಿಂದೆಯೇ ಪ್ರಾರಂಭವಾಗಿದೆ. ಈಗ ಅಲ್ಲಿ 66 ಸಾವಿರಕ್ಕೂ ಮಿಕ್ಕಿ ಸರ್ಫ್ ಲೈಫ್ ಸೇವರ್ ಇದ್ದಾರೆ. 600 ಕ್ಕೂ ಹೆಚ್ಚು ಸರ್ಫ್ ಲೈಫ್ ಸೇವರ್ ಸೆಂಟರ್ ಅಲ್ಲಿದೆ. ಆದರೆ ಭಾರತ ಸಮುದ್ರಾವೃತ ದೇಶವಾದರೂ ನಮ್ಮಲ್ಲಿ ಒಂದೂ ಸರ್ಫ್ ಲೈಫ್ ಸೇವರ್ ಸೆಂಟರ್ ಇಲ್ಲ. ಪರಿಣಾಮ ಸಮುದ್ರದಲ್ಲಿ ಯಾವ ರೀತಿ ಈಜಬೇಕು ಎಂಬ ಪರಿಕಲ್ಪನೆ ಯಾರಲ್ಲೂ ಇಲ್ಲ. ಆದ್ದರಿಂದ ವರ್ಷಕ್ಕೆ ಲಕ್ಷಕ್ಕೂ ಮಿಕ್ಕಿ ಸಮುದ್ರದಲ್ಲಿ ಮುಳುಗಿ ಮೃತಪಡುತ್ತಿದ್ದಾರೆ. ಹಾಗಾಗಿ ಸಮುದ್ರದಲ್ಲಿ ಮುಳುಗಿ ಮೃತಪಡುವವರ ಸಂಖ್ಯೆಯನ್ನು ಕಡಿಮೆ ಮಾಡಲು ಸರ್ಫ್ ಲೈಫ್ ಸೇವಿಂಗ್ ಇಂಡಿಯಾ ಸಂಸ್ಥೆಯನ್ನು ಆರಂಭಿಸಲಾಗಿದೆ.
ಮಂಗಳೂರಿನಲ್ಲಿ ಮೊದಲ ಬಾರಿಗೆ ಸರ್ಫ್ ಲೈಫ್ ಸೇವಿಂಗ್ ತರಬೇತಿ ಕೇಂದ್ರವನ್ನು ಆಸ್ಟ್ರೇಲಿಯಾ ಹಾಗೂ ಇನ್ನಿತರ ದೇಶಗಳೊಂದಿಗೆ ಸಂಬಂಧವನ್ನಿರಿಸಿಕೊಂಡು ಅಲ್ಲಿಯ ತರಬೇತುದಾರರನ್ನು ಕರೆಸಿ, ಇಲ್ಲಿಯ ತರಬೇತುದಾರರರು ಬಹಳಷ್ಟು ಮುತುವರ್ಜಿಯಿಂದ ತರಬೇತಿ ನೀಡಲಾಗುತ್ತದೆ.
ದ.ಕ.ಜಿಲ್ಲಾಡಳಿತವೂ ಸರ್ಫ್ ಲೈಫ್ ಸೇವಿಂಗ್ ಬಗ್ಗೆ ಆಸಕ್ತಿ: ಸರ್ಫ್ ಲೈಫ್ ಸೇವಿಂಗ್ ಇಂಡಿಯಾದ ತರಬೇತುದಾರರು 2013 ರ ಬಳಿಕ ಮಂಗಳೂರು, ಉಡುಪಿ, ಕೋಡಿಬೇಂಗ್ರೆ, ಮುರುಡೇಶ್ವರ, ಗೋಕರ್ಣ, ಕಾರವಾರ ಮೊದಲಾದ ಕಡೆಗಳಲ್ಲಿ 500ಕ್ಕೂ ಅಧಿಕ ಮಂದಿಗೆ ತರಬೇತಿ ನೀಡಿದೆ. ಇದರಲ್ಲಿ ತರಬೇತಿ ಪಡೆದವರು ಬಹಳಷ್ಟು ಮಂದಿ ಸಮುದ್ರಪಾಲಾಗುವವರನ್ನು ರಕ್ಷಣೆ ಮಾಡಿದ್ದಾರೆ. ರಾಜ್ಯ ಸರ್ಕಾರವೂ ಈ ಬಗ್ಗೆ ಆಸಕ್ತಿ ತಳೆದಿದ್ದು, ಮೂರು ವರ್ಷಗಳ ಹಿಂದೆ ಒಂದಷ್ಟು ಅನುದಾನವನ್ನು ಮೀಸಲಿರಿಸಿದ್ದರು. ಆದರೆ ಕಾರಣಾಂತರಗಳಿಂದ ಅದು ಸ್ಥಗಿತಗೊಂಡಿತ್ತು. ಆದರೆ ಈಗಿನ ದ.ಕ.ಜಿಲ್ಲಾಧಿಕಾರಿ ಈ ಬಗ್ಗೆ ಬಹಳಷ್ಟು ಆಸಕ್ತರಾಗಿದ್ದು, ಭಾರತದಲ್ಲಿಯೇ ಪ್ರಥಮ ಬಾರಿಗೆ ಮಂಗಳೂರಿನ ತಣ್ಣೀರುಬಾವಿಯಲ್ಲಿ ಸರ್ಫ್ ಲೈಫ್ ಸೇವಿಂಗ್ ತರಬೇತಿ ಕೇಂದ್ರವನ್ನು ಸ್ಥಾಪಿಸಲು ಉತ್ಸುಕರಾಗಿದ್ದಾರೆ. ಕೆಲವೇ ತಿಂಗಳುಗಳಲ್ಲಿ ಇದು ಆರಂಭವಾಗುವ ಭರವಸೆ ಇದೆ.
ಕ್ರೀಡೆಯಾಗಿಯೂ ಸರ್ಫ್ ಲೈಫ್ ಸೇವಿಂಗ್ ಪರಿಗಣನೆ: ಸರ್ಫ್ ಲೈಫ್ ಸೇವಿಂಗ್ ನಲ್ಲಿ ಸಮುದ್ರದಲ್ಲಿ ಈಜಾಟ ಮಾತ್ರವಲ್ಲ ಹಲವಾರು ವಿಧಗಳಲ್ಲಿ ತರಬೇತಿ ನೀಡಲಾಗುತ್ತಿದೆ. ಸಮುದ್ರದಲ್ಲಿ ಸ್ವತಃ ಅಪಾಯವನ್ನು ಎದುರಿಸುವುದು, ಅಪಾಯದಲ್ಲಿ ಸಿಲುಕಿರುವವರನ್ನು ರಕ್ಷಣೆ ಮಾಡುವುದು, ಹೃದಯಾಘಾತ, ಹಾವು ಕಡಿತವಾದಾಗ ತುರ್ತು ಚಿಕಿತ್ಸೆ ನೀಡುವ ಕಾರ್ಡಿಯೋ ಪಲ್ಮ್ ನರಿ ರೆಸಿಟೇಷನ್ (ಸಿಪಿಆರ್) ತರಬೇತಿ ನೀಡಲಾಗುತ್ತದೆ. ಇವಿಷ್ಟಲ್ಲದೆ ಸರ್ಫ್ ಲೈಫ್ ಸೇವಿಂಗ್ ನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಯೂ ನಡೆಯುತ್ತದೆ. ಇದು ಆಟವೆಂದು ಪರಿಗಣಿತವಾದ ಬಳಿಕ ಈ ಬಗ್ಗೆ ಬಹಳಷ್ಟು ಮಂದಿ ಯುವಸಮೂಹ ಆಸಕ್ತಿ ತಳೆದಿದೆಯಂತೆ.
ಈ ಬಗ್ಗೆ ಸರ್ಫ್ ಲೈಫ್ ಸೇವಿಂಗ್ ಇಂಡಿಯಾದ ನಿರ್ದೇಶಕ ಪಾರ್ಥ ವಾರಣಾಸಿ ಮಾತನಾಡಿ, ಸರ್ಫ್ ಲೈಫ್ ಸೇವಿಂಗ್ ಬಗ್ಗೆ ಯುವಸಮೂಹ ಸ್ವಯಂ ಆಸಕ್ತರಾಗಿ ತರಬೇತಿ ಪಡೆಯಬೇಕು. ಬಳಿಕ ಇನ್ನೊಬ್ಬರಿಗೂ ಇದನ್ನು ಕಲಿಸಬೇಕು. ಹಾಗಾದಲ್ಲಿ ಮಾತ್ರ ಬಹಳಷ್ಟು ಪ್ರಾಣನಷ್ಟವಾಗುದನ್ನು ತಪ್ಪಿಸಲು ಸಾಧ್ಯ. ನಮಗೂ ಸರ್ಫ್ ಲೈಫ್ ಸೇವಿಂಗ್ನ್ನು ಎಲ್ಲಾ ಕಡೆಗಳಿಗೆ ವಿಸ್ತರಿಸುವ ಬಗ್ಗೆ ಚಿಂತನೆ ಇದೆ ಎಂದು ಹೇಳಿದರು.
ಸರ್ಫ್ ಲೈಫ್ ಸೇವಿಂಗ್ ಇಂಡಿಯಾದ ಸದಸ್ಯ ನಿರೂಪ್ ಜಿ.ಆರ್. ಮಾತನಾಡಿ, ಈವರೆಗೆ 350 ಕ್ಕೂ ಅಧಿಕ ಮಕ್ಕಳಿಗೆ ಸರ್ಫ್ ಲೈಫ್ ಸೇವಿಂಗ್ ತರಬೇತಿ ನೀಡಿದ್ದೇವೆ. ಅಲ್ಲದೆ ಲೈಫ್ ಗಾರ್ಡ್ ರೀತಿಯಲ್ಲಿ 80ಕ್ಕೂ ಅಧಿಕ ಮಂದಿ ಯುವಕರಿಗೆ ತರಬೇತಿ ನೀಡಿದ್ದೇವೆ. ಗೋಕರ್ಣದಲ್ಲಿ ನಮ್ಮಿಂದ ತರಬೇತಿ ಪಡೆದವರು ಲೈಫ್ ಗಾರ್ಡ್ ಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರು ಎರಡು ವರ್ಷಗಳಲ್ಲಿ ಸುಮಾರು 20 ಮಂದಿ ಪ್ರವಾಸಿಗರನ್ನು ರಕ್ಷಣೆ ಮಾಡಿದ್ದಾರೆ ಎಂದು ಹೇಳಿದರು.