ಬಂಟ್ವಾಳ: ಕಳೆದ ವಾರ ಬಂಟ್ವಾಳ ಬೈಪಾಸ್ನ ಅಪಾರ್ಟ್ ಮೆಂಟ್ ಒಂದರಲ್ಲಿ ಭೀಕರವಾಗಿ ಹತ್ಯೆಗೀಡಾಗಿದ್ದ ಸುರೇಂದ್ರ ಬಂಟ್ವಾಳ್ (39) ಕೊಲೆ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಬಂಟ್ವಾಳ ಪೊಲೀಸರು ಯಶಸ್ವಿಯಾಗಿದ್ದು, ಇದುವರೆಗೆ 9 ಮಂದಿಯನ್ನು ಬಂಧಿಸಿದ್ದಾರೆ.
ಹಣಕಾಸು ಮತ್ತು ವೈಯಕ್ತಿಕ ದ್ವೇಷದಿಂದ ಕೃತ್ಯ ನಡೆಸಿರುವುದಾಗಿ ತಿಳಿದುಬಂದಿದ್ದು, ಪ್ರಕರಣಕ್ಕೆ ಸಂಬಂಧಿಸಿ ಇನ್ನಷ್ಟು ಬಂಧನ ನಡೆಯುವ ಸಾಧ್ಯತೆ ಇದ್ದು, ತನಿಖೆ ಸಾಗಿದೆ ಎಂದು ದ.ಕ.ಜಿಲ್ಲಾ ವರಿಷ್ಠಾಧಿಕಾರಿ ಬಿ.ಎಂ.ಲಕ್ಷ್ಮೀ ಪ್ರಸಾದ್ ಬಂಟ್ವಾಳದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಅಮ್ಟಾಡಿ ಗ್ರಾಮದ ಅಜೆಕಲ ನಿವಾಸಿ ಸತೀಶ್ ಕುಲಾಲ್ (39), ನೀರು ಮಾರ್ಗ ಬೊಂಡಂತಿಲ ಗ್ರಾಮದ ಗಿರೀಶ್ (28) ಜೊತೆ ಸೇರಿ ಈ ಕೃತ್ಯವೆಸಗಿದ ಆರೋಪದಲ್ಲಿ ಬಂಧಿತರಾಗಿದ್ದು, ಸಹಕರಿಸಿದ ಪ್ರದೀಪ್ ಕುಮಾರ್ ಅಲಿಯಾಸ್ ಪಪ್ಪು, ಶರೀಫ್ ಅಲಿಯಾಸ್ ಸಯ್ಯದ್ ಶರೀಫ್, ವೆಂಕಪ್ಪ ಪೂಜಾರಿ ಅಲಿಯಾಸ್ ವೆಂಕಟೇಶ ಮತ್ತು ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿರುವ ಆಕಾಶಭವನ ಶರಣ್ ಎಂಬವರು ಒಳಸಂಚು ನಡೆಸಿದ ಹಿನ್ನೆಲೆಯಲ್ಲಿ ಹಾಗೂ ಸಹಕರಿಸಿದ ಆರೋಪದಲ್ಲಿ ರಾಜೇಶ್ ಮತ್ತು ದಿವ್ಯರಾಜ್ ಮತ್ತು ಅನಿಲ್ ಪಂಪ್ ವೆಲ್ ಎಂಬವರು ಬಂಧಿತರಾಗಿದ್ದಾರೆ ಎಂದು ಎಸ್ಪಿ ತಿಳಿಸಿದ್ದಾರೆ.
ಆರೋಪಿಗಳ ಪತ್ತೆಗೆ ದಕ್ಷಿಣ ಕನ್ನಡದ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಬಿ.ಎಮ್ ಲಕ್ಷ್ಮೀಪ್ರಸಾದ್, ಬಂಟ್ವಾಳ ಉಪವಿಭಾಗ ಉಪಾಧೀಕ್ಷಕ ವೆಲಂಟೈನ್ ಡಿಸೋಜಾ ಮಾರ್ಗದರ್ಶನದಲ್ಲಿ ಪ್ರಕರಣದ ತನಿಖೆಯನ್ನು ಪೊಲೀಸ್ ಇನ್ಸ್ ಪೆಕ್ಟರ್ ಟಿ.ಡಿ ನಾಗರಾಜ್ ನಡೆಸುತ್ತಿದ್ದು ಉಪವಿಭಾಗದ ವಿವಿಧ ಎಸ್.ಐ.ಗಳಾದ ಅವಿನಾಶ್ ಎಚ್. ಗೌಡ, ಪ್ರಸನ್ನ, ಸಂಜೀವ ಕೆ, ನಂದಕುಮಾರ್, ವಿನೋದ್ ರೆಡ್ಡಿ, ರಾಜೇಶ್ ಕೆ ವಿ, ಕಲೈಮಾರ್, ಕುಮಾರ್ ಕಾಂಬ್ಳೆ ಪಿಐ ರವಿ ಬಿ ಎಸ್, ಪಿ.ಐ. ಡಿಸಿಐಬಿ ಚೆಲುವರಾಜ್ ಡಿಸಿಐಬಿ ಸಿಬ್ಬಂದಿಗಳು, ತಾಂತ್ರಿಕ ವಿಭಾಗದ ಸಿಬ್ಬಂದಿ, ವಿವಿಧ ಠಾಣೆಗಳ ನುರಿತ ಸಿಬ್ಬಂದಿಗಳನ್ನೊಳಗೊಂಡ ಒಟ್ಟು 5 ವಿಶೇಷ ಪತ್ತೆ ತಂಡವನ್ನು ರಚಿಸಲಾಗಿತ್ತು.
ಯಾಕಾಗಿ ಕೃತ್ಯ: ಇಲ್ಲಿಯವರೆಗೆ ಸೂಕ್ತ ರೀತಿಯಲ್ಲಿ ಯೋಜಿತವಾಗಿ ತನಿಖೆ ನಡೆಯುತ್ತಿದ್ದು ತನಿಖೆಯಲ್ಲಿ ಆರೋಪಿಗಳು ಹಣಕಾಸಿನ ಹಾಗೂ ವೈಯಕ್ತಿಕ ದ್ವೇಷದಿಂದ ಒಳಸಂಚು ನಡೆಸಿ ಕೃತ್ಯ ಎಸಗಿರುವುದು ತಿಳಿದುಬಂದಿದೆ. ದಸ್ತಗಿರಿಯಾಗಿರುವ ಆರೋಪಿಗಳು ಪೊಲೀಸ್ ಕಸ್ಟಡಿಯಲ್ಲಿದ್ದು ಹೆಚ್ಚಿನ ವಿಚಾರಣೆ ನಡೆಯುತ್ತಿದೆ. ಕೃತ್ಯದಲ್ಲಿ ಭಾಗಿಯಾಗಿರುವ ಉಳಿದ ಆರೋಪಿಗಳ ಪತ್ತೆಯ ಬಗ್ಗೆ ವಿಶೇಷ ತಂಡವು ಶ್ರಮಿಸುತ್ತಿದ್ದು ತನಿಖೆ ಮುಂದುವರೆದಿದೆ ಎಂದು ಎಸ್ಪಿ ಹೇಳಿದ್ದಾರೆ.