ಬೆಳ್ತಂಗಡಿ: ವಿಜ್ಞಾನ ಸಂಶೋಧನಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಮೂರ್ಜೆ ಸುನೀತಾ ಪ್ರಭುರವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವಾಲಯದಿಂದ ಕೊಡುವ ಪ್ರಧಾನಮಂತ್ರಿಗಳ ಬಾಲ ಪುರಸ್ಕಾರ ಪ್ರಶಸ್ತಿಗೆ ಭಾಜನರಾದರು. ರಾಷ್ಟ್ರಪತಿ ಭವನದಲ್ಲಿ ಮಾನ್ಯ ರಾಷ್ಟ್ರಪತಿ ರಮಾನಾಥ್ ಕೋವಿಂದ್ ಅವರು ಪ್ರಶಸ್ತಿ ಪ್ರದಾನ ಮಾಡಿದರು.
ವಿಶ್ವದಾದ್ಯಂತ ಗಮನ ಸೆಳೆದ ಬಾಲ ಪ್ರತಿಭೆ ಸುನೀತಾ ಅವರು ಜ. 26ರಂದು ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ಭಾಗವಹಿಸಲಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿ ಆಗುವ ಸುವರ್ಣಾವಕಾಶವನ್ನೂ ಪಡೆದಿದ್ದಾರೆ.
ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕಾಗಿ ಸುನೀತಾ ಪ್ರಭು ಅವರು ಅನ್ವೇಷಿಸಿರುವ ಸೊಳ್ಳೆ ನಿವಾರಕ ಸಾಧನವನ್ನು ಪುಣೆಯ ಐಐಎಸ್‌ಇಆರ್ ಮತ್ತು ಎನ್‌ಸಿಎಲ್‌ನಲ್ಲಿ ಪರೀಕ್ಷಿಸಿ ಅಭಿವೃದ್ಧಿ ಪಡಿಸಲಾಯಿತು. ಕಡಿಮೆ ವೆಚ್ಚದ ಈ ಸಾಧನ ಆರೋಗ್ಯ ಸಮಾಜಕ್ಕೆ ಮಹತ್ತರ ಪಾತ್ರವಹಿಸಿದೆ.
ಇದೇ ಪ್ರಾಜೆಕ್ಟ್ 2018 ರಲ್ಲಿ ದೆಹಲಿಯಲ್ಲಿ ನಡೆದ ಐಆರ್‌ಐಎಸ್ ರಾಷ್ಟ್ರೀಯ ವಿಜ್ಞಾನ ಮೇಳದಲ್ಲಿ ರಾಷ್ಟ್ರೀಯ ಗ್ರ್ಯಾಂಡ್ ಪ್ರಶಸ್ತಿಗಳಿಸಿದ್ದು, 2019ರಲ್ಲಿ ಅಮೆರಿಕಾದಲ್ಲಿ ನಡೆದ 80ನೇ ವಿಜ್ಞಾನ ಮತ್ತು ತಂತ್ರಜ್ಞಾನ ಮೇಳದಲ್ಲಿ ಭಾರತವನ್ನು ಪ್ರತಿನಿಧಿಸಿದ ಹಿನ್ನೆಲೆಯಲ್ಲಿ ಈ ಬಾಲ ಪುರಸ್ಕಾರ ಲಭಿಸಿದೆ.
ಬೆಳ್ತಂಗಡಿಯ ಉದ್ಯಮಿ ವಿವೇಕಾನಂದ ಪ್ರಭು ಮತ್ತು ಶಾಂತಲಾ ಪ್ರಭು ದಂಪತಿಗಳ ಪುತ್ರಿಯಾಗಿರುವ ಸುನೀತಾ ಪ್ರಭು ಪ್ರಸಕ್ತ ಮಂಗಳೂರಿನ ಸಿಎಫ್ಏಎಲ್ ವಿದ್ಯಾಸಂಸ್ಥೆಯಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾರೆ.