ಕಡಬ(ದಕ್ಷಿಣ ಕನ್ನಡ): ಇಲ್ಲಿನ ಮುಖ್ಯ ಪೇಟೆ ವ್ಯಾಪ್ತಿ ಸೇರಿದಂತೆ ತಾಲೂಕಿನ ಬಹುತೇಕ ಕಡೆಗಳಲ್ಲಿ ಲಕ್ಷಗಟ್ಟಲೆ ಖರ್ಚು ಮಾಡಿ ಬೀದಿ ದೀಪಗಳನ್ನು ಅಳವಡಿಸಲಾಗಿದೆ. ಆದರೆ, ಅವುಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲಾಗುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಕಡಬ ಪೇಟೆಯಲ್ಲಿ ಸೇರಿದಂತೆ ಇಲ್ಲಿನ ವಾರ್ಡ್ಗಳಲ್ಲಿ ಬೀದಿ ದೀಪದ ನಿರ್ವಹಣೆಯ ಗುತ್ತಿಗೆ ಪಡೆದುಕೊಂಡಿದ್ದ ಗುತ್ತಿಗೆದಾರರು ಸಮರ್ಪಕವಾಗಿ ಬೀದಿ ದೀಪಗಳ ನಿರ್ವಹಣೆ ಮಾಡುತ್ತಿಲ್ಲ. ಅಷ್ಟೇ ಅಲ್ಲದೆ, ಕಳಪೆ ಗುಣಮಟ್ಟದ ಬೀದಿ ದೀಪಗಳನ್ನು ಅಳವಡಿಸಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ. ಬೀದಿಗಳಲ್ಲಿ ದೀಪಗಳು ಉರಿಯದೇ ಜನ ರಾತ್ರಿ ಸಮಯದಲ್ಲಿ ಓಡಾಡುವುದು ಕಷ್ಟಕರವಾಗಿದೆ.
ಈ ಬಗ್ಗೆ ಕೂಡಲೇ ಕಡಬ ಪಟ್ಟಣ ಪಂಚಾಯತ್ ಆಡಳಿತಾಧಿಕಾರಿಗಳು ಸಮಸ್ಯೆಗಳನ್ನು ಗಂಭೀರವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.