ಮಂಗಳೂರು: ನಗರದ ಮುಕ್ಕ ಎಂಬಲ್ಲಿ ಹುಚ್ಚು ನಾಯಿಗಳ ಕಾಟ ಹೆಚ್ಚಾಗಿದೆ. ಮಹಾನಗರ ಪಾಲಿಕೆ ವ್ಯಾಪ್ತಿಯ ಮುಕ್ಕ, ಮಲ್ಲಮಾರ್, ದೊಂಬೇಲ್, ದೊಂಬೇಲ್ ಬೀಚ್, ಶರತ್ ಬಾರ್ ರಸ್ತೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹುಚ್ಚುನಾಯಿಗಳು ಹೆಚ್ಚಾಗಿವೆ ಎಂದು ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಕೆಲದಿನಗಳ ಹಿಂದೆ ಮಲ್ಲಮಾರ್ ನಿವಾಸಿಯೊಬ್ಬರ ಮನೆಯೊಳಗೆ ನುಗ್ಗಿದ ನಾಯಿಗಳು ಮನೆ ಮಾಲಿಕ ಸಂತೋಷ್ ಹಾಗೂ ಅವರ ಮಗಳಿಗೆ ಕಚ್ಚಿ ಗಾಯಗೊಳಿಸಿದ್ದವು. ಪರಿಣಾಮ, ಸಂತೋಷ್ ಅವರ ಮಗಳ ಕೈ ನರವೇ ತುಂಡಾಗಿತ್ತು. ಕಾಲಿಗೂ ತೀವ್ರ ಸ್ವರೂಪದ ಗಾಯಗಳಾಗಿತ್ತು. ಸದ್ಯ ವೆನ್ಲಾಕ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: 'ಅವಿವಾಹಿತ ಪುತ್ರಿ ಪೋಷಕರಿಂದ ತನ್ನ ಮದುವೆ ವೆಚ್ಚ ಪಡೆಯಬಹುದು'
ಈ ಘಟನೆಯ ಬಳಿಕ ಸ್ಥಳೀಯರು ಭಯ ಆವರಿಸಿದೆ. ಮನೆಯಿಂದ ಹೊರ ಹೋಗಬೇಕಾದರೆ ಗುಂಪು ಗುಂಪಾಗಿ ತೆರಳಬೇಕಾದ ಪರಿಸ್ಥಿತಿ ಇದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. 'ಇಲ್ಲಿದ್ದ ಹುಚ್ಚು ನಾಯಿಗಳನ್ನು ಕೊಲ್ಲಲಾಗಿದ್ದು, ಕಡಿತಕ್ಕೊಳಗಾದ ಅಪ್ಪ-ಮಗಳ ವೈದ್ಯಕೀಯ ಖರ್ಚುಗಳನ್ನು ಮಹಾನಗರ ಪಾಲಿಕೆ ಭರಿಸಲಿದೆ. ಸಂತ್ರಸ್ತರನ್ನು ಖುದ್ದು ಭೇಟಿಯಾಗಿ ಮಾತನಾಡುತ್ತೇನೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು' ಎಂದು ಕಾರ್ಪೊರೇಟರ್ ಕುಮಾರಿ ಶ್ವೇತಾ ಪೂಜಾರಿ ಭರವಸೆ ನೀಡಿದ್ದಾರೆ.