ಮಂಗಳೂರು: ಕಳೆದ ವಾರ ಪಿಎಫ್ಐ ಮತ್ತು ಎಸ್ಡಿಪಿಐ ಮುಖಂಡರ ಮನೆ ಹಾಗು ಕಚೇರಿ ಮೇಲೆ ಎನ್ಐಎ ದಾಳಿ ನಡೆಸಿದ ಬೆನ್ನಲ್ಲೇ ಇಂದು ನಗರ ಪೊಲೀಸರು ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಪೊಲೀಸರು ಪಿಎಫ್ಐ ಕಾರ್ಯಾಕರ್ತರ ಮನೆಗಳ ಮೇಲೆ ದಾಳಿ ಮಾಡಿ ಜಿಲ್ಲಾಧ್ಯಕ್ಷ ಸೇರಿ 14ಕ್ಕೂ ಹೆಚ್ಚು ಪಿಎಫ್ಐ ಮುಖಂಡರನ್ನು ವಶಕ್ಕೆ ಪಡೆದಿದ್ದಾರೆ.
ರಾಜ್ಯದಲ್ಲಿ ಪಿಎಫ್ಐ ಮುಖಂಡರ ಮೇಲೆ ರಾಜ್ಯ ಪೊಲೀಸರು ದಾಳಿ ನಡೆಸುತ್ತಿರುವ ಭಾಗವಾಗಿ ಮಂಗಳೂರಿನಲ್ಲಿಯೂ ದಾಳಿ ನಡೆದಿದೆ. ರಾತ್ರೋರಾತ್ರಿ ಪೊಲೀಸರ ಭಾರಿ ಕಾರ್ಯಾಚರಣೆ ನಡೆಸಿದ್ದು, 14ಕ್ಕೂ ಅಧಿಕ ಪಿಎಫ್ಐ ಮುಖಂಡರನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಪಿಎಫ್ಐ ಜಿಲ್ಲಾಧ್ಯಕ್ಷ ಇಜಾಜ್ ಅಹ್ಮದ್, ಮುಖಂಡರಾದ ಫಿರೋಜ್ ಖಾನ್, ರಾಜಿಕ್, ಮುಜಾವರ್, ನೌಫಲ್ ಸೇರಿದಂತೆ ಹಲವು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಮಂಗಳೂರಿನ ಉಳ್ಳಾಲ, ಕಾವೂರು, ಸುರತ್ಕಲ್, ಬಜಪೆ ಹಾಗೂ ಪುತ್ತೂರು ಭಾಗದಲ್ಲಿ ದಾಳಿ ನಡೆಸಲಾಗಿತ್ತು. ವಶಕ್ಕೆ ಪಡೆದುಕೊಂಡ ಪಿಎಫ್ಐ ಮುಖಂಡರನ್ನು ಪೊಲೀಸರು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದ್ದಾರೆ.
ಪೊಲೀಸ್ ಠಾಣಾ ವ್ಯಾಪ್ತಿಯ ತಾಲೂಕು ದಂಡಾಧಿಕಾರಿಗಳ ಮುಂದೆ ವಶಕ್ಕೆ ಪಡೆದ ಪಿಎಫ್ಐ ಮುಂಖಡರನ್ನು ಹಾಜರುಪಡಿಸಲಾಗಿದೆ. ಇವರನ್ನು ಮಂಗಳೂರಿನ ಕೊಡಿಯಾಲ್ ಬೈಲ್ನಲ್ಲಿರುವ ಜಿಲ್ಲಾ ಕಾರಾಗೃಹಕ್ಕೆ ತರಲಾಗಿದೆ.
ಓದಿ: ಕೋಲಾರದಲ್ಲೂ ಪಿಎಫ್ಐ ಮುಖಂಡರ ಮನೆ ಮೇಲೆ ಪೊಲೀಸರ ದಾಳಿ; 6 ಜನ ವಶಕ್ಕೆ