ಮಂಗಳೂರು: ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಪತ್ತೆಗಾಗಿ ಮಂಗಳವಾರದಿಂದ ಆ್ಯಂಟಿಜೆನ್ ಟೆಸ್ಟ್ ಆರಂಭಿಸಲಾಗಿದೆ.
ಮಂಗಳೂರಿನ ವೆನ್ಲಾಕ್ ಕೋವಿಡ್ ಆಸ್ಪತ್ರೆಯಲ್ಲಿ ಕೋವಿಡ್ ಟೆಸ್ಟ್ ಮಾಡಲು ಆ್ಯಂಟಿಜೆನ್ ಕಿಟ್ ಬಂದಿದೆ. ಇದರಿಂದ 15ರಿಂದ 20 ನಿಮಿಷದಲ್ಲಿ ಕೊರೊನಾ ಫಲಿತಾಂಶ ಬರಲಿದೆ. ಈ ಹಿಂದೆ ಟೆಸ್ಟ್ಗೆ ಗಂಟಲು ದ್ರವ ಕೊಟ್ಟರೆ ಎರಡು ದಿನಗಳ ಕಾಲ ಕಾಯಬೇಕಾಗಿತ್ತು. ಅದರೆ ಆ್ಯಂಟಿಜೆನ್ ಕಿಟ್ ಬಂದಿರುವ ಹಿನ್ನೆಲೆ ವೇಗವಾಗಿ ಫಲಿತಾಂಶ ಹೊರ ಬರಲಿದೆ.
ಜಿಲ್ಲೆಗೆ 3,500 ಆ್ಯಂಟಿಜೆನ್ ಕೋವಿಡ್ ಟೆಸ್ಟ್ ಕಿಟ್ಗಳು ಬಂದಿದ್ದು, ಆ್ಯಂಟಿಜೆನ್ ಟೆಸ್ಟ್ ಕಿಟ್ನಲ್ಲಿರುವ ದ್ರಾವಣದಲ್ಲಿ ಗಂಟಲು ದ್ರವ ಮಾದರಿಯನ್ನು ಹಾಕುತ್ತಾರೆ. ಇದರಲ್ಲಿದ್ದ ಕೆಲವು ಹನಿಗಳನ್ನು ಟೆಸ್ಟ್ ಮಾಡಲು ಇರುವ ಸ್ಟ್ರಿಪ್ಗೆ ಹಾಕಿದಾಗ ಹದಿನೈದು ನಿಮಿಷದಲ್ಲಿ ಕೆಂಪು ಬಣ್ಣದ ಗೆರೆಗಳು ಕಾಣಿಸಿಕೊಂಡರೆ ಪಾಸಿಟಿವ್ ಎಂದು ದೃಢಪಡುತ್ತದೆ. ಕೆಂಪು ಗೆರೆ ಬಾರದೆ ಇದ್ದರೆ ಅದು ನೆಗೆಟಿವ್ ಆಗಿರುತ್ತದೆ.
ಈ ಬಗ್ಗೆ ಈಟಿವಿ ಭಾರತದೊಂದಿಗೆ ಮಾತನಾಡಿದ ದ.ಕ ಜಿಲ್ಲಾ ಪ್ರಭಾರ ಆರೋಗ್ಯಾಧಿಕಾರಿ ಡಾ. ರತ್ನಾಕರ, ಈ ಆ್ಯಂಟಿಜೆನ್ ಟೆಸ್ಟ್ ವಿದೇಶದಿಂದ ಬಂದವರಿಗೆ, ಸರ್ಜರಿಗೆ ಒಳಗಾಗಬೇಕಾದವರಿಗೆ ಮತ್ತು ಸಾವನ್ನಪ್ಪಿದವರ ಕೋವಿಡ್ ಟೆಸ್ಟ್ ಮಾಡಲು ಆದ್ಯತೆ ಮೇಲೆ ಬಳಸಲಾಗುತ್ತದೆ. ಎಲ್ಲರಿಗೂ ಇದನ್ನು ಬಳಸಲಾಗುವುದಿಲ್ಲ. ತುರ್ತು ಸಂದರ್ಭದಲ್ಲಿ ಆ್ಯಂಟಿಜೆನ್ ಟೆಸ್ಟ್ ಮೂಲಕ ಕೋವಿಡ್ ಪತ್ತೆ ಹಚ್ಚಲಾಗುತ್ತದೆ ಎಂದು ತಿಳಿಸಿದ್ದಾರೆ.