ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕಮಿಟಿಯ ವತಿಯಿಂದ ಸೌಹಾರ್ದ ಸಮಾಗಮ ಕಾರ್ಯಕ್ರಮ ನಡೆಸಲಾಯಿತು. ಜನರ ಮಧ್ಯೆ ಅಪನಂಬಿಕೆ ಸೃಷ್ಟಿ ಮಾಡಲು ಇಸ್ಲಾಂನ ಜಿಹಾದ್ನ್ನು ವೈಭವೀಕರಣ ಮಾಡಲಾಗುತ್ತದೆ. ಇಂದು ನಡೆಯುತ್ತಿರುವ ಉಗ್ರವಾದಕ್ಕೂ, ಭಯೋತ್ಪಾನೆಗೂ ಇಸ್ಲಾಂನ ಜಿಹಾದ್ಗೆ ಸಂಬಂಧವಿಲ್ಲ ಎಂದು ಮುಸ್ಲಿಂ ಜಮೀಯತ್ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಮೌಲಾನಾ ಸಫೀ ಸಾದಿ ಹೇಳಿದರು.
ಕರ್ನಾಟಕ ಮುಸ್ಲಿಂ ಜಮೀಯತ್ನ ದಕ್ಷಿಣ ಕನ್ನಡ ಜಿಲ್ಲಾ ಕಮಿಟಿಯ ವತಿಯಿಂದ ನಡೆದ ಸೌಹಾರ್ದ ಸಮಾಗಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಭಯೋತ್ಪಾದಕರು, ಉಗ್ರವಾದಿಗಳು ಮುಸ್ಲಿಮರಲ್ಲ ಎಂದು 1400 ವರ್ಷಗಳ ಹಿಂದೆ ಪೈಗಂಬರ್ ಮಹಮ್ಮದರು ಫತ್ವಾ ಹೊರಡಿಸಿದ್ದಾರೆ. ಅದೇ ರೀತಿ ಕೋಮುವಾದಕ್ಕೆ ಪ್ರಚೋದನೆ ನೀಡುವವ ಮುಸಲ್ಮಾನನಲ್ಲ. ಪ್ರಚೋದನೆ ನೀಡಿ ಯುದ್ಧ ಮಾಡಿ ಸಾಯುವವ ಮುಸಲ್ಮಾನನಲ್ಲ ಎಂದು ಅವರು ಹೇಳಿದರು.
ಇನ್ನು ರೆ.ಫಾ.ಡಾ.ರವಿ ಸಂತೋಷ್ ಕುಮಾರ್ ಮಾತನಾಡಿ, ನಮ್ಮ ಭಾರತವು ಹಲವು ಧರ್ಮ, ಜಾತಿ, ಪಂಗಡಗಳಿರುವ ದೇಶ. ಭಾರತದ ಸಂಸ್ಕೃತಿ ಏಕಂ ಸತ್ ವಿಪ್ರ ಬಹುದಾ ವದಂತಿ ಎಂದು ಹೇಳುತ್ತದೆ. ಅಂದರೆ ಒಂದೇ ದೇವರು ನಾಮ ಹಲವು ಎಂದು ಹೇಳುವ ಬಹುದೊಡ್ಡ ಸಂಸ್ಕೃತಿ ಭಾರತದ್ದು ಎಂದು ಹೇಳಿದರು. ಇನ್ನು ಕೇಮಾರು ಮಠದ ಈಶ ವಿಠಲದಾಸ ಸ್ವಾಮೀಜಿ ಮಾತನಾಡಿ, ಈ ಕಾರ್ಯಕ್ರಮದ ಮೂಲಕ ಎಲ್ಲರೂ ನಾವು ಒಟ್ಟಾಗಿದ್ದೇವೆ. ಈ ಮೂಲಕ ನಮ್ಮ ಮಂಗಳೂರು ಕೂಡಾ ಶಾಂತವಾಗಲಿ, ನಮ್ಮ ರಾಜ್ಯ, ದೇಶಗಳೂ ಶಾಂತವಾಗಲಿ ಎಂಬುದು ನನ್ನ ಪ್ರಾರ್ಥನೆ ಎಂದು ತಿಳಿಸಿದರು.
ಈ ಸಂದರ್ಭ ಸಚಿವ ವೇದವ್ಯಾಸ ಕಾಮತ್, ಮಾಜಿ ಸಚಿವ ರಮಾನಾಥ ರೈ, ವಿಧಾನ ಪರಿಷತ್ ವಿಪಕ್ಷ ಸದಸ್ಯ ಐವನ್ ಡಿಸೋಜ, ಹಿಂದೂ ಮುಖಂಡರಾದ ಎಂ.ಬಿ.ಪುರಾಣಿಕ್, ಅಜಿತ್ ಕುಮಾರ್ ರೈ ಮಾಲಾಡಿ, ಪ್ರದೀಪ್ ಕುಮಾರ್ ಕಲ್ಕೂರ, ಯನೆಪೊಯ ಸಂಸ್ಥೆಯ ಅಬ್ದುಲ್ ಕುಂಞಿ ಮುಂತಾದ ಅನೇಕ ಉದ್ಯಮಿಗಳು, ವಿವಿಧ ಧಾರ್ಮಿಕ ಮುಖಂಡರು, ವೈದ್ಯರು, ಗಣ್ಯರು ಉಪಸ್ಥಿತರಿದ್ದರು.