ಮಂಗಳೂರು: ಪ್ರಸಿದ್ದ ನಾಗಾರಾಧನೆಯ ಪುಣ್ಯ ಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಇಂದಿನಿಂದ ಕೆಲವೊಂದು ಸೇವೆಗಳು ಆರಂಭಗೊಳ್ಳಲಿದೆ. ಆದರೆ ಪ್ರಧಾನ ಸೇವೆಗಳಾದ ಸರ್ಪಸಂಸ್ಕಾರ, ಆಶ್ಲೇಷ ಬಲಿ, ನಾಗಪ್ರತಿಷ್ಠೆ ಮತ್ತು ಮಹಾಭಿಷೇಕವು ಜು.29(ಗುರುವಾರ) ರಿಂದ ಪ್ರಾರಂಭಗೊಳ್ಳಲಿದೆ.
ಸರ್ಕಾರದ ಕೋವಿಡ್ ಮಾರ್ಗಸೂಚಿಗೆ ಅನುಗುಣವಾಗಿ ಶ್ರೀ ದೇವಳದಲ್ಲಿ ಸೇವೆಗಳನ್ನು ನೆರವೇರಿಸಲು ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ. ಬೆಳಗ್ಗೆ 6.30ರಿಂದ ಮಧ್ಯಾಹ್ನ 1.30ರ ತನಕ ಬಳಿಕ ಮಧ್ಯಾಹ್ನ 3.30ರಿಂದ ರಾತ್ರಿ 8.30 ಗಂಟೆ ತನಕ ಭಕ್ತರಿಗೆ ಶ್ರೀ ದೇವರ ದರುಶನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಶ್ರೀ ದೇವಳದ ಪ್ರಕಟಣೆ ತಿಳಿಸಿದೆ.
ತುಲಾಭಾರ ಆರಂಭ
ಇಂದಿನಿಂದ ಸರ್ಪಸಂಸ್ಕಾರ, ಆಶ್ಲೇಷ ಬಲಿ, ನಾಗಪ್ರತಿಷ್ಠೆ ಮತ್ತು ಪಂಚಾಮೃತ ಮಹಾಭಿಷೇಕ ಹೊರತುಪಡಿಸಿ ಉಳಿದೆಲ್ಲಾ ಸೇವೆಗಳು ಆರಂಭವಾಗಲಿದೆ. ಭಕ್ತರಿಗೆ ಬೋಜನ ಪ್ರಸಾದ ವಿತರಣೆ ಆರಂಭವಾಗಲಿದೆ.ಅಲ್ಲದೆ ಭಕ್ತರಿಗೆ ಶ್ರೀ ದೇವಳದ ವಸತಿ ಗೃಹಗಳಲ್ಲಿ ತಂಗಲು ಅವಕಾಶ ನೀಡಲಾಗಿದೆ. ಲಡ್ಡು, ಪಂಚ ಕಜ್ಜಾಯ ಪ್ರಸಾದ, ತೀರ್ಥ ಬಾಟ್ಲಿ ವಿತರಣೆ ಆರಂಭಗೊಳ್ಳಲಿದೆ.
ಜು.29 ಗುರುವಾರದಿಂದ ಶ್ರೀದೇವಳದ ಪ್ರಧಾನ ಸೇವೆಗಳಾದ ಸರ್ಪಸಂಸ್ಕಾರ, ಆಶ್ಲೇಷ ಬಲಿ, ನಾಗಪ್ರತಿಷ್ಠೆ, ಮಹಾಭಿಷೇಕ ಸೇವೆಗಳು ಆರಂಭಗೊಳ್ಳಲಿದೆ. ಈ ಸೇವೆಯನ್ನು ನೆರವೇರಿಸುವ ಸೇವಾರ್ಥಿಗಳು ಕನಿಷ್ಠಕೋವಿಡ್-19 ಪ್ರಥಮ ಡೋಸ್ ಲಸಿಕೆ ಪಡೆದಿರಬೇಕು ಮತ್ತು ಆರ್‌ಟಿಪಿಸಿಆರ್ ಪರೀಕ್ಷೆ ನಡೆಸಿದ ವರದಿ ಹಾಜರು ಪಡಿಸಬೇಕು. ಕಡ್ಡಾಯವಾಗಿ ಮಾಸ್ಕ್ ಧಾರಣೆ ಮತ್ತು ಸಾಮಾಜಿಕ ಅಂತರ ಪಾಲನೆ ಮಾಡಬೇಕು. ಈ ಸೇವೆಗಳ ಪ್ರತಿ ಟಿಕೇಟಿಗೆ 2 ಭಕ್ತರಿಗೆ ಮಾತ್ರ ಸೇವೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ.
ಇಷ್ಟರ ತನಕ ಒಂದು ಬ್ಯಾಚ್‌ನಲ್ಲಿ ನಡೆಯುತ್ತಿದ್ದ ಸರ್ಪಸಂಸ್ಕಾರ ಸೇವೆಯು ಗುರುವಾರದಿಂದ ಪ್ರತಿದಿನ ಎರಡು ಬ್ಯಾಚ್‌ನಲ್ಲಿ ನಡೆಯಲಿದೆ. ಬೆಳಗ್ಗೆ 8 ಗಂಟೆಗೆ ಒಂದನೇ ಸರದಿ ಹಾಗೂ ಎರಡನೇ ಸರದಿಯು 10ಗಂಟೆಗೆ ಆರಂಭಗೊಳ್ಳಲಿದೆ. ಈಗಾಗಲೇ ಸುಮಾರು 6400 ಮಂದಿ ಭಕ್ತರು ಸರ್ಪಸಂಸ್ಕಾರ ಸೇವೆಗೆ ಆನ್‌ಲೈನ್ ಮೂಲಕ ಕಾಯ್ದಿರಿಸಿದ ಕಾರಣ ಇವರಿಗೆ ಪ್ರಥಮ ಆದ್ಯತೆ ನೀಡಿ ದಿನ ಒಂದಕ್ಕೆ ತಲಾ ಎರಡು ಪಾಳಿಯಲ್ಲಿ ತಲಾ 90 ರಂತೆ ಒಟ್ಟು 180 ಸೇವೆಗಳಿಗೆ ಅವಕಾಶ ನೀಡಲಾಗಿದೆ. ಪ್ರತಿ ದಿನ 4 ಸರದಿಯಲ್ಲಿ ಒಟ್ಟು 240 ಭಕ್ತರಿಗೆ ಆಶ್ಲೇಷ ಬಲಿ ಸೇವೆ ನೆರವೇರಿಸಲು ಅವಕಾಶ ಕಲ್ಪಿಸಲಾಗಿದೆ.