ಮಂಗಳೂರು: ದೇವಸ್ಥಾನಗಳಲ್ಲಿ ಕಳ್ಳತನ ಹಾಗೂ ಪಿಕ್ ಪಾಕೆಟ್ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್ವೊಂದನ್ನು ಮಂಗಳೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಗದಗ ಮೂಲದ ಮುತ್ತಪ್ಪ ಛಲವಾದಿ (55), ಪ್ರಕಾಶ್ ಚೆನ್ನಪ್ಪ (26), ಶೋಭ ಮುಟ್ಟಗಾರ (40), ಕುಮಾರಮ್ಮ ಮಾರುತಿ ಮುಟ್ಟಗಾರ (45), ಶಾಂತಮ್ಮ ಮುಟ್ಟಗಾರ (55), ಚಂದ್ರಶೇಖರ ಶಿವರೆಡ್ಡಪ್ಪ ಕರಮುಡಿ (49) ಬಂಧಿತರು.
ಜ.12 ರಂದು ಮಂಗಳೂರಿನ ಕಟೀಲು ದೇವಸ್ಥಾನದಲ್ಲಿ ಮಹಿಳೆಯೊಬ್ಬರ ಹ್ಯಾಂಡ್ ಬ್ಯಾಗ್ ಕದ್ದು ಖದೀಮರು ಪರಾರಿಯಾಗಿದ್ದರು. ಈ ಬಗ್ಗೆ ತನಿಖೆ ನಡೆಸುತ್ತಿದ್ದ ಪೊಲೀಸರು ಇದೀಗ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 75 ಸಾವಿರ ರೂ. ಮೌಲ್ಯದ 7 ಮೊಬೈಲ್, 21,450 ರೂ. ನಗದು ಹಾಗೂ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.
ಇನ್ನು ಇವರು ಗೋವಾದ ಶಾಂತದುರ್ಗಾ ದೇವಸ್ಥಾನ, ಮಂಗೇಶ್ ದೇವಸ್ಥಾನ, ಗೋಕರ್ಣ, ಇಡಗುಂಜಿ, ಮುರುಡೇಶ್ವರ, ಕೊಲ್ಲೂರು, ಶೃಂಗೇರಿ , ಕಟೀಲ್ ದೇವಸ್ಥಾನಗಳಲ್ಲಿ ಕಳ್ಳತನ ನಡೆಸಿದ್ದಾರೆ ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ.