ಪುತ್ತೂರು (ದ.ಕ) : ಜ್ಞಾನಪೀಠ ಪುರಸ್ಕೃತ ಡಾ.ಶಿವರಾಮ ಕಾರಂತರ ಕರ್ಮಭೂಮಿ ಪುತ್ತೂರಿನ ಬಾಲವನದಲ್ಲಿರುವ ಕಾರಂತರ ಮನೆ, ಗ್ರಂಥಾಲಯ ಹಾಗೂ ವಸ್ತು ಸಂಗ್ರಹಾಲಯ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳಿಸದೆ ಹಾಗೆಯೇ ಬಿಟ್ಟಿರುವ ಇಂಟ್ಯಾಕ್ ಸಂಸ್ಥೆಗೆ ನೋಟಿಸ್ ನೀಡುವಂತೆ ಧಾರ್ಮಿಕದತ್ತಿ ಇಲಾಖೆ ರಾಜ್ಯ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಈ ಕುರಿತಂತೆ ನಡೆದ ಸಭೆಯಲ್ಲಿ ಮಾತನಾಡಿದ ಸಚಿವರು, ಇಂಟ್ಯಾಕ್ ಸಂಸ್ಥೆಯವರು ಹೆಚ್ಚುವರಿ ಅಡ್ವಾನ್ಸ್ ಪಡೆದುಕೊಂಡಿದ್ದು, ತಕ್ಷಣ ಕಾಮಗಾರಿ ನಡೆಸುವಂತೆ ಅವರಿಗೆ ನೋಟಿಸ್ ನೀಡಬೇಕು. ಅವರು ಬಾರದೇ ಇದ್ದಲ್ಲಿ ಅವರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಿ ಕಾಮಗಾರಿಯ ಗುತ್ತಿಗೆಯನ್ನು ನಿರ್ಮಿತಿ ಕೇಂದ್ರಕ್ಕೆ ಒಪ್ಪಿಸಿ ಎಂದು ಸೂಚಿಸಿದ್ದಾರೆ.
ಬಾಲವನವನ್ನು ಪ್ರವಾಸಿ ತಾಣವನ್ನಾಗಿ ಮಾಡುವ ನಿಟ್ಟಿನಲ್ಲಿ ಯೋಜನೆ ರೂಪಿಸಿ, ಬಾಲವನದಲ್ಲಿ ನಡೆಸಬೇಕಾದ ಕಾಮಗಾರಿಯನ್ನು ಕೈಗೆತ್ತಿಕೊಳ್ಳುವ ಮೂಲಕ ಡಾ.ಶಿವರಾಮ ಕಾರಂತ ಬಾಲವನವನ್ನು ಪರಿಪೂರ್ಣ ಅಭಿವೃದ್ಧಿಪಡಿಸಿ ಸಮಾಜಕ್ಕೆ ಅರ್ಪಣೆ ಮಾಡುವ ನಿಟ್ಟಿನಲ್ಲಿ ಚಿಂತನೆಗಳನ್ನು ನಡೆಸಲಾಗಿದೆ. ಅದರಂತೆ ಕಾರಂತರ ವರ್ಚಸ್ಸಿಗೆ ಧಕ್ಕೆ ಬಾರದಂತೆ ಸಾಂಸ್ಕೃತಿಕ, ಸಾಹಿತ್ಯಿಕ ಕಾರ್ಯಕ್ರಮಗಳು ಪ್ರತಿ ತಿಂಗಳು ಒಂದರಂತೆ ನಡೆಯಬೇಕು. ಈ ನಿಟ್ಟಿನಲ್ಲಿ ಆಸಕ್ತಿ ಇರುವ, ಕಾರಂತರ ಚಿಂತನೆಗಳ ಕುರಿತು ಧ್ವನಿ ಎತ್ತುವ ತಂಡವನ್ನು ರಚಿಸಿ ವರ್ಷದ 12 ತಿಂಗಳಲ್ಲಿ ಪ್ರತೀ ತಿಂಗಳು ಹಮ್ಮಿಕೊಳ್ಳಬೇಕಾದ ಕಾರ್ಯಕ್ರಮಗಳನ್ನು ಈಗಲೇ ತಯಾರಿಸುವಂತೆ ಸಭೆಯಲ್ಲಿ ಸೂಚನೆ ನೀಡಿದರು.
ಈಗಾಗಲೇ ವಸ್ತು ಸಂಗ್ರಹಾಲಯದ ಕಾಮಗಾರಿ ಪೂರ್ಣಗೊಂಡಿದೆ. ಉಳಿದಂತೆ ಗ್ರಂಥಾಲಯ ನಿರ್ಮಾಣಕ್ಕೆ ಹೆಚ್ಚುವರಿ 10 ಲಕ್ಷ ರೂ. ಹಣದ ಕೊರತೆ ಉಂಟಾಗಿದೆ ಎಂದು ಸಹಾಯಕ ಆಯುಕ್ತ ಡಾ.ಯತೀಶ್ ಉಳ್ಳಾಲ್ ತಿಳಿಸಿದಾಗ, ಸಚಿವರು ಕಾಮಗಾರಿಯ ಅಂದಾಜುಪಟ್ಟಿ ತಯಾರಿಸಿ ಹೆಚ್ಚುವರಿಗೆ ಹಣವನ್ನು ಈಗಾಗಲೇ ಇರುವ ಬಾಲವನ ಟ್ರಸ್ಟ್ನಿಂದ ಭರಿಸಬೇಕು. ಕಾರಂತರ ಮೂಲ ಸ್ವರೂಪಕ್ಕೆ ಧಕ್ಕೆ ಬಾರದಂತೆ ಕಲಾವಿದರನ್ನು ಕರೆಸಿ ಜುಲೈ ತಿಂಗಳ ಅಂತ್ಯದೊಳಗೆ ಕಾಮಗಾರಿ ಆರಂಭಿಸುವಂತೆ ತಿಳಿಸಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಮೀನುಗಾರಿಕಾ ಇಲಾಖೆ, ಪ್ರವಾಸೋದ್ಯಮ ಇಲಾಖೆಗಳಿಗೆ ಬಾಲವನ ಆಕರ್ಷಣೀಯ ಕೇಂದ್ರವನ್ನಾಗಿಸುವ ನಿಟ್ಟಿನಲ್ಲಿ ತಮ್ಮಿಂದಾದ ಏನು ಕೊಡುಗೆಗಳನ್ನು ನೀಡಬಹುದು ಎಂಬುದರ ಕುರಿತು ಚಿಂತನೆ ನಡೆಸುವಂತೆ ಇಲಾಖೆಗಳಿಗೆ ಸೂಚನೆ ನೀಡಿದರು.
ಅಲ್ಲದೆ ನಿರಂತರ ಸಾಂಸ್ಕೃತಿಕ ಚಟುವಟಿಕೆ ನಡೆಸುವ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಯೋಜನೆಯನ್ನು ರೂಪಿಸುವಂತೆ ತಿಳಿಸಿದರು. ಶಾಸಕ ಸಂಜೀವ ಮಠಂದೂರು ಮಾತನಾಡಿ, ಬಾಲವನದಲ್ಲಿ ನಡೆಸಬಹುದಾದ ನಿರಂತರ ಚಟುವಟಿಕೆಗಳ ಕುರಿತು ಕೇವಲ ವರದಿಗಳನ್ನು ಮಾತ್ರ ಸರ್ಕಾರಕ್ಕೆ ಒಪ್ಪಿಸಿದ್ದಾರೆಯೇ ಹೊರತು ಶಿವರಾಮ ಕಾರಂತರ ಹಿತಾಸಕ್ತಿಗೆ ಬದ್ಧವಾಗಿ ಯಾರೂ ಕೆಲಸ ಮಾಡಲಿಲ್ಲ ಎಂದರು.
ಮುಂದೆ ನಡೆಸಬಹುದಾದ ಚಟುವಟಿಕೆಗಳು ಅರಣ್ಯರೋದನ, ಸರ್ಕಾರಿ ಕಾರ್ಯಕ್ರಮ ಆಗಿರಬಾರದು. ಅದು ಸಾರ್ವಜನಿಕ ಕಾರ್ಯಕ್ರಮ ಆಗಿ ರೂಪುಗೊಳ್ಳಬೇಕು. ಅದಕ್ಕಾಗಿ ಸ್ಥಳೀಯರನ್ನು ಸಮಿತಿಯಲ್ಲಿ ಸೇರಿಸಿಕೊಳ್ಳಬೇಕು ಎಂದರು.
ಈ ವೇಳೆ ದ.ಕ.ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್, ಅಪರ ಜಿಲ್ಲಾಧಿಕಾರಿ ರೂಪಾ ಎಂ.ಜೆ., ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಉಪಸ್ಥಿತರಿದ್ದರು.