ಉಳ್ಳಾಲ(ದಕ್ಷಿಣಕನ್ನಡ): ಕೊಣಾಜೆ ನಡುಪದವು ಪಿಎ ಇಂಜಿನಿಯರಿಂಗ್ ಕಾಲೇಜಿನ ಮೇಲೆ ದಾಳಿ ನಡೆಸಿರುವ ಎನ್ಐಎ ತಂಡದ ಏಳು ಜನ ಅಧಿಕಾರಿಗಳು ಶಂಕಿತ ಉಗ್ರನ ಜೊತೆ ಸಂಪರ್ಕ ಹೊಂದಿದ್ದ ವಿದ್ಯಾರ್ಥಿಯನ್ನು ವಶಕ್ಕೆ ಪಡೆದು ಬೆಂಗಳೂರಿಗೆ ಕರೆದೊಯ್ದಿದ್ದಾರೆ. ಅಧಿಕಾರಿಗಳು ವಶಕ್ಕೆ ಪಡೆದ ವಿದ್ಯಾರ್ಥಿಯ ಮೆಕ್ಯಾನಿಕಲ್ ವಿಭಾಗದ ಅಂತಿಮ ವರ್ಷದ ಉಡುಪಿ ಮೂಲದವರು ಎಂದು ತಿಳಿದುಬಂದಿದೆ. ಈ ವಿದ್ಯಾರ್ಥಿ ಶಿವಮೊಗ್ಗದ ಪುರಲೆ ಸಮೀಪದ ತುಂಗಾ ನದಿ ತೀರದಲ್ಲಿ ಪ್ರಾಯೋಗಿಕವಾಗಿ ಸ್ಫೋಟಕವನ್ನು ಸ್ಫೋಟಿಸಿದ್ದ ಪ್ರಕರಣದಲ್ಲಿ ಬಂಧನವಾಗಿರುವ ಶಂಕಿತ ಉಗ್ರನ ಜೊತೆ ನಿರಂತರ ಸಂಪರ್ಕ ಹಾಗೂ ವಿವಿಧ ಚಟುವಟಿಕೆಗಳಲ್ಲಿ ಜತೆಯಾಗಿದ್ದ ಎಂಬ ವಿಚಾರದಲ್ಲಿ ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಬಂಧಿತ ಶಂಕಿತ ಉಗ್ರ ಮಾಝ್ ಮುನೀರ್ ಎಂಬಾತ ಐಸಿಸ್ ಉಗ್ರ ಸಂಘಟನೆ ಜತೆಗೆ ಸಂಪರ್ಕ ಹೊಂದಿದ್ದಾನೆ ಎಂದು ಹೇಳಲಾಗ್ತಿದೆ.
ಶಿವಮೊಗ್ಗ ಪ್ರಕರಣದಲ್ಲಿ ಸೈಯದ್ ಯಾಸೀನ್, ಮಾಝ್ ಮುನೀರ್, ಶಾರೀಕ್ ಅಹಮ್ಮದ್ ಎಂಬವರನ್ನು ಬಂಧಿಸಲಾಗಿತ್ತು. ಯಾಸಿನ್ ಶಿವಮೊಗ್ಗದಲ್ಲಿ ಎಂಜಿನಿಯರಿಂಗ್ ಓದಿದ್ದರೆ, ಮತ್ತೋರ್ವ ಕೊಣಾಜೆಯ ನಡುಪದವು ಸಮೀಪದ ಕಾಲೇಜಿನಲ್ಲಿ ಅಂತಿಮ ವರ್ಷದ ಎಂಟೆಕ್ ಓದುತ್ತಿದ್ದಾನೆ. ತೀರ್ಥಹಳ್ಳಿ ಮೂಲದ ಶಾರೀಕ್ ಮಹ್ಮದ್ ಬಟ್ಟೆ ಅಂಗಡಿಯೊಂದರಲ್ಲಿ ಸೇಲ್ಸ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದನು ಎಂದು ತಿಳಿದು ಬಂದಿದೆ.
ವಿಧ್ವಂಸಕ ಕೃತ್ಯಕ್ಕೆ ಸಂಚು: ಬಂಧನಕ್ಕೆ ಒಳಗಾಗಿರುವ ಸೈಯದ್ ಯಾಸಿನ್, ಮಾಜ್ ಮುನೀರ್, ಶಾರೀಕ್ ಅಹ್ಮದ್ ಶಿಮೊಗ್ಗದ ಅಕ್ಷರ ಕಾಲೇಜಿನಲ್ಲಿ ಒಟ್ಟಿಗೆ ದ್ವಿತೀಯ ಪಿಯುಸಿ ಅಭ್ಯಾಸ ಮಾಡಿದ್ದರು. ಬಳಿಕ ಯಾಸಿನ್ ಶಿವಮೊಗ್ಗದಲ್ಲಿ ಎಂಜಿನಿಯರಿಂಗ್ ಓದಿದ್ದರೆ ಮುನೀರ್ ಮಂಗಳೂರಿನ ಮುಡಿಪು ಸಮೀಪದ ಕಾಲೇಜಿನಲ್ಲಿ ಅಂತಿಮ ವರ್ಷದ ಎಂಟೆಕ್ ಓದುತ್ತಿದ್ದನು. ತೀರ್ಥಹಳ್ಳಿ ಮೂಲದ ಶಾರೀಕ್ ಮಹ್ಮದ್ ಬಟ್ಟೆ ಅಂಗಡಿಯೊಂದರಲ್ಲಿ ಸೇಲ್ಸ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದನು. ಈ ಮೂವರು ಶಿವಮೊಗ್ಗವನ್ನು ಕೇಂದ್ರ ಸ್ಥಳವನ್ನಾಗಿಸಿಕೊಂಡು ಮಂಗಳೂರು ಸೇರಿದಂತೆ ವಿವಿಧೆಡೆ ಉಗ್ರ ಚಟುವಟಿಕೆ ನಡೆಸಲು ಸಂಚು ರೂಪಿಸಿದ್ದರು ಎನ್ನಲಾಗಿದೆ. ಮೂವರೂ ಬಾಂಬ್ ತಯಾರಿಸುವ ಬಗ್ಗೆ ತರಬೇತಿ ಪಡೆದಿದ್ದರು. ವಿದೇಶಿ ಉಗ್ರ ಸಂಘಟನೆಯ ಸದಸ್ಯರ ಜೊತೆ ಇವರು ಸಂವಹನ ನಡೆಸುತ್ತಿದ್ದರು ಎಂಬುದರ ಬಗ್ಗೆ ಸಾಕ್ಷ್ಯಗಳು ಲಭ್ಯವಾಗಿದೆ ಎನ್ನಲಾಗುತ್ತಿದೆ.
ಶಿವಮೊಗ್ಗದ ಸಿದ್ದೇಶ್ವರ ನಗರ ನಿವಾಸಿಯಾದ ಸೈಯದ್ ಯಾಸಿನ್ ಜೆಎನ್‌ಎನ್‌ಸಿ ಕಾಲೇಜಿನಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ವ್ಯಾಸಂಗ ಮುಗಿಸಿದ್ದ. ಈತ ತನ್ನ ನಿವಾಸದಿಂದ 3-4 ದೂರದಲ್ಲಿರುವ ಪುರಲೆ ಸಮೀಪದ ತುಂಗಾ ನದಿ ತೀರವನ್ನು ಆತನ ಕಾರ್ಯ ಚಟುವಟಿಕೆ ಸ್ಥಾನ ಮಾಡಿಕೊಂಡಿದ್ದ. ತುಂಗಾನದಿ ತೀರದಲ್ಲಿ ಪ್ರಯೋಗಿಕವಾಗಿ ಸ್ಫೋಟಕವನ್ನು ಸ್ಫೋಟಿಸುತ್ತಿದ್ದ ಎಂಬ ಮಾಹಿತಿ ಬಹಿರಂಗವಾಗಿತ್ತು. ಈ ಕಾರಣಕ್ಕೆ ಪೊಲೀಸರು ಹಾಗೂ ವಿಧಿ ವಿಜ್ಞಾನ ತಂಡ ಯಾಸಿನ್‌ನನ್ನು ಸ್ಥಳಕ್ಕೆ ಕರೆತಂದು ಮಹಜರು ನಡೆಸಿದ್ದಾರೆ.
ಕೃಷಿ ತೋಟ ಇರುವ ಕಾರಣ ಕಾಡು ಪ್ರಾಣಿಗಳಿಗೆ ಭಯ ಮೂಡಿಸಲು ಈ ಭಾಗದಲ್ಲಿ ಪಟಾಕಿಗಳನ್ನು ಸಿಡಿಸಲಾಗುತ್ತಿದೆ. ಈ ವಿಷಯವನ್ನು ಲಾಭ ಮಾಡಿಕೊಂಡಿದ್ದ ಯಾಸಿನ್ ಈ ಭಾಗವನ್ನೇ ತನ್ನ ಪರೀಕ್ಷೆಯ ಕೇಂದ್ರವನ್ನಾಗಿ ಮಾಡಿಕೊಂಡಿದ್ದ. ತಾನು ತಯಾರಿಸಿದ ಸ್ಫೋಟಕಗಳನ್ನು ಇಲ್ಲಿ ತಂದು ಪರೀಕ್ಷೆ ಮಾಡಿಕೊಳ್ಳುತ್ತಿದ್ದ. ಇಲ್ಲಿನ ನಿವಾಸಿಗಳು ಈತ ಪಟಾಕಿ ಸಿಡಿಸುತ್ತಿದ್ದಾನೆ ಎಂದು ಭಾವಿಸಿದ್ದರು. ಆದರೆ ಪೊಲೀಸರ ತನಿಖೆಯಿಂದ ಈತ ಸಿಡಿಸುತ್ತಿದ್ದುದು ಪಟಾಕಿ ಅಲ್ಲ ಬಾಂಬ್ ಅನ್ನೋದು ತಿಳಿದು ಬಂದಿತ್ತು.
ಓದಿ: ಶಿವಮೊಗ್ಗ ಸ್ಫೋಟ ಪ್ರಕರಣ ಕಂದಾಯ ಆಯುಕ್ತರಿಂದ ತನಿಖೆ ಎಂದ ಸರ್ಕಾರ: ಸಭಾತ್ಯಾಗ ಮಾಡಿದ ಕಾಂಗ್ರೆಸ್