ಕಡಬ : ಸ್ವಂತ ತಂಗಿಯ ಅಪ್ರಾಪ್ತ ಮಗಳಿಗೆ ನಿರಂತರ ಕಿರುಕುಳ ಹಾಗೂ ಮಾನಭಂಗಕ್ಕೆ ಯತ್ನಿಸಿದ ಆರೋಪದಲ್ಲಿ ಮಾವನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ ಹಾಗೂ ಬಾಲಕಿ ಮೇಲೆ ಹಲ್ಲೆ ಮಾಡಿದ ಆರೋಪದಡಿ ಆತನ ಪತ್ನಿಯ ವಿರುದ್ಧ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವೃದ್ಧ ಅಜ್ಜಿಯ ಜೊತೆಯಲ್ಲಿ ವಾಸವಾಗಿರುವ ಬಾಲಕಿ, ತನ್ನ ತೋಟದಲ್ಲಿ ನೀರು ಹಾಯಿಸಲು ಸ್ಪಿಂಕ್ಲರ್ ಸೆಟ್ ಮಾಡುತ್ತಿದ್ದ ಸಂದರ್ಭದಲ್ಲಿ ಆಕೆಯ ಮಾವ ಜಾನ್ಸನ್ ಎಂಬಾತ ಬಾಲಕಿಗೆ ಹಲ್ಲೆ ನಡೆಸಿ, ನಾನು ನಿನ್ನನ್ನು ರೇಪ್ ಮಾಡುತ್ತೇನೆಂದು, ನೀನು ಎಲ್ಲರೆದುರು ಹೇಳಿಕೊಂಡು ಬಂದಿದ್ದೀಯಾ, ಅದರಂತೆ ನಾನು ಈಗ ನಿನ್ನನ್ನು ನಿಜವಾಗಿಯೂ ರೇಪ್ ಮಾಡಿ ತೋರಿಸುತ್ತೇನೆ ಎಂದು ಹೇಳಿ, ಮಾನಭಂಗಕ್ಕೆ ಯತ್ನಿಸಿ, ಹಲ್ಲೆ ನಡೆಸಿರುವ ಬಗ್ಗೆ ದೂರಿನಲ್ಲಿ ಆರೋಪಿಸಲಾಗಿದೆ.
ಮಾವನ ಈ ನೀಚ ಕೃತ್ಯಕ್ಕೆ ಹೆದರಿದ ಬಾಲಕಿಯು ಕಿರುಚಿದ್ದು, ಈ ವೇಳೆ ಆಕೆಯ ಅಜ್ಜಿ ಬಂದಿದ್ದಾರೆ. ಈ ವೇಳೆ ಯುವತಿಯ ಅಜ್ಜಿಗೂ ಆರೋಪಿ ಜಾನ್ ಕೈಯಿಂದ ಗುದ್ದಿ, ತಲೆಗೆ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ. ಈ ವೇಳೆ ಸ್ಥಳೀಯರು ಘಟನಾ ಸ್ಥಳಕ್ಕೆ ಬಂದಿದ್ದು, ಆರೋಪಿಯ ಪತ್ನಿ ಶಿಕ್ಷಕಿಯಾಗಿರುವ ಜೆನ್ಸಿ ಎಂಬಾಕೆಯೂ ಕೂಡ ಬಾಲಕಿಗೆ ಹಲ್ಲೆ ಮಾಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸದ್ಯ ಸಂತ್ರಸ್ತೆಯು ಪುತ್ತೂರು ಆಸ್ಪತ್ರೆಯಲ್ಲಿ ದಾಖಲಾಗಿ, ಚಿಕಿತ್ಸೆ ಪಡೆದಿದ್ದಾಳೆ. ಆಕೆ ನೀಡಿದ ದೂರಿನಂತೆ ಕಡಬ ಪೊಲೀಸರು ಆರೋಪಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ. ಕೆಲವು ತಿಂಗಳ ಹಿಂದೆ ಆರೋಪಿ ಜಾನ್ಸನ್ ಹಾಗೂ ಆತನ ಪತ್ನಿ ಜೆನ್ಸಿ ಹಲ್ಲೆ ನಡೆಸಿರುವ ಮತ್ತು ತನಗೆ ಜೀವ ಬೆದರಿಕೆ ಇರುವ ಬಗ್ಗೆ ಬಾಲಕಿ ಎಸ್ಪಿಗೂ ಕೂಡ ದೂರು ನೀಡಿದ್ದಳು.