ಬೈರುತ್: ಹಿಜ್ಬುಲ್ ಮುಖಂಡನನ್ನು ಗುರಿಯಾಗಿಸಿಕೊಂಡು ಶುಕ್ರವಾರ ಬೈರುತ್‌ನಲ್ಲಿರುವ ಹಿಜ್ಬುಲ್ಲಾದ ಪ್ರಧಾನ ಕಚೇರಿ ಮೇಲೆ ದಾಳಿ ನಡೆಸಲಾಗಿದ್ದು, ಬಹುಮಹಡಿ ಅಪಾರ್ಟ್‌ಮೆಂಟ್ ಕಟ್ಟಡಗಳನ್ನು ನೆಲಸಮಗೊಳಿಸಲಾಗಿದೆ ಎಂದು ಇಸ್ರೇಲ್ ಮಿಲಿಟರಿ ತಿಳಿಸಿದೆ.
ಘಟನೆಯಲ್ಲಿ ಹಿಜ್ಬುಲ್ ಕಮಾಂಡರ್ ಸೇರಿದಂತೆ 6 ಮಂದಿ ಸಾವನ್ನಪ್ಪಿದ್ದು, 91 ಜನ ಗಾಯಗೊಂಡಿದ್ದಾರೆ ಎಂದು ಲೆಬನಾನ್‌ನ ಆರೋಗ್ಯ ಸಚಿವರು ತಿಳಿಸಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ ಲೆಬನಾನ್ ರಾಜಧಾನಿ ಮೇಲೆ ನಡೆಸಿದ ಅತ್ಯಂತ ದೊಡ್ಡ ದಾಳಿ ಇದಾಗಿದೆ. ಇದು ನಡೆಯುತ್ತಿರುವ ಸಂಘರ್ಷ ಪೂರ್ಣ ಯುದ್ಧಕ್ಕೆ ತಿರುಗುವ ಸಮೀಪದಲ್ಲಿದೆ ಎಂದು ತಿಳಿಸಿದೆ.
ಹಿಜ್ಬುಲ್ಲಾ ನಾಯಕ ಹಸನ್ ನಸ್ರಲ್ಲಾ ಗುರಿಯಾಗಿಸಿ ಈ ದಾಳಿ ನಡೆಸಲಾಗಿದೆ. ಈ ಘಟನೆ ಬಗ್ಗೆ ಇಸ್ರೇಲ್ ಸೇನೆ ಯಾರನ್ನು ಗುರಿಯಾಗಿಸಿ ಈ ದಾಳಿ ನಡೆಸಿದೆ ಎಂಬುದನ್ನು ತಿಳಿಸಿಲ್ಲ. ನಸ್ರುಲ್ಲಾ ಗುರಿಯಾಗಿಸಿ ದಾಳಿ ನಡೆಸಲಾಗಿದೆಯೇ ಎಂಬುದನ್ನು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ. ಈ ಬಗ್ಗೆ ಹಿಜ್ಬುಲ್ಲಾ ಕೂಡ ಹೇಳಿಕೆ ನೀಡಿಲ್ಲ ಎಂದು ವರದಿಗಳು ತಿಳಿಸಿವೆ.
ಆರು ಕಟ್ಟಡದ ಅವಶೇಷ ಅಡಿಗಳಲ್ಲಿ ಜನರು ಸಿಲುಕಿರುವ ಸಾಧ್ಯತೆ ಇದ್ದು, ಸಾವಿನ ಸಂಖ್ಯೆ ಏರಿಕೆಯಾಗಲಿದೆ. ಆರಂಭಿಕ ಸ್ಫೋಟದ ನಂತರ ಇಸ್ರೇಲ್ ದಕ್ಷಿಣದ ಉಪನಗರದ ಇತರ ಪ್ರದೇಶಗಳ ಮೇಲೆ ಸರಣಿ ದಾಳಿ ಆರಂಭಿಸಿದೆ.
ದಾಳಿ ಸಂದರ್ಭದಲ್ಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಯುನೈಟೆಡ್ ಸ್ಟೇಟ್ಗೆ ಸಣ್ಣ ಭೇಟಿ ನೀಡಿದ್ದು, ಅಮೆರಿಕದಲ್ಲಿ ಅವರು ವಿಶ್ವಸಂಸ್ಥೆಯಲ್ಲಿ ಭಾಷಣ ನಡೆಸಿದ್ದಾರೆ. ಈ ವೇಳೆ ಕಳೆದ ಎರಡು ವಾರಗಳಲ್ಲಿ ಹಿಜ್ಬುಲ್ಲಾ ವಿರುದ್ಧ ನಡೆಸುತ್ತಿರುವ ಕಾರ್ಯಾಚರಣೆ ತೀವ್ರಗೊಳಿಸುವುದಾಗಿ ತಿಳಿಸಿದ್ದಾರೆ. ವಿಶ್ವಸಂಸ್ಥೆಯ ಭಾಷಣದ ಸಂದರ್ಭದಲ್ಲಿ ದಾಳಿ ಕುರಿತು ಸುದ್ದಿಯು ನೆತನ್ಯಾಹು ತಿಳಿಯುತ್ತಿದ್ದಂತೆ, ಭಾಷಣ ಮೊಟಕುಗೊಳಿಸಿದ ತಮ್ಮ ದೇಶಕ್ಕೆ ಮರಳಿದರು.
ಇಸ್ರೇಲಿ ಸೇನೆಯ ವಕ್ತಾರ ರಿಯರ್ ಅಡ್ಮ್ ಡೇನಿಯಲ್ ಹಗರಿ ತಿಳಿಸಿದಂತೆ ಈ ದಾಳಿಗಳು ಹಿಜ್ಬುಲ್ಲಾ ನಾಯಕರ ಪ್ರಧಾನ ಕಚೇರಿಯನ್ನು ಗುರಿಯಾಗಿಸಿಕೊಂಡಿವೆ. ಈ ಕಡ್ಡಟಗಳು ನಿವಾಸಿಗಳ ಕಟ್ಟಡದ ಅಡಿಯಲ್ಲಿ ಭೂಗತವಾಗಿದೆ ಎಂದಿದ್ದಾರೆ.
ಲೆಬನಾನ್‌ನ ರಾಷ್ಟ್ರೀಯ ಸುದ್ದಿ ಸಂಸ್ಥೆ ಪ್ರಕಾರ ಬೈರುತ್‌ನ ದಹಿಯೆ ಉಪನಗರಗಳ ಜನನಿಬಿಡ, ಪ್ರಧಾನವಾಗಿ ಶಿಯಾ ಜಿಲ್ಲೆಯಾದ ಹ್ಯಾರೆಟ್ ಹ್ರೆಕ್‌ನಲ್ಲಿ ರಾತ್ರಿಯ ಸುಮಾರಿಗೆ ದಾಳಿ ನಡೆದಿದ್ದು, ಆರು ಅಪಾರ್ಟ್‌ಮೆಂಟ್ ಟವರ್ ಹಾನಿಗೊಂಡಿದೆ. ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ ಬೈರುತ್‌ನ ಉತ್ತರಕ್ಕೆ ಸುಮಾರು 30 ಕಿಲೋಮೀಟರ್‌ಗಳವರೆಗೆ ಕಿಟಕಿಗಳು ಕಂಪಿಸಿವೆ.
ಇದನ್ನೂ ಓದಿ: ಲೆಬನಾನ್ ಮೇಲೆ ಮುಂದುವರೆದ ದಾಳಿ, ಮತ್ತೆ 72 ಜನ ಸಾವು: ಕದನವಿರಾಮ ಇಲ್ಲವೆಂದ ಇಸ್ರೇಲ್, 620ಕ್ಕೇರಿದ ಸಾವಿನ ಸಂಖ್ಯೆ