ಮಂಗಳೂರು: ನಗರದಲ್ಲಿ ಕಳೆದ ಎರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿದ್ದ ಮಳೆ ಇಂದು ಬೆಳಗ್ಗೆಯಿಂದ ಕೊಂಚ ಬಿಡುವು ನೀಡಿದೆ. ಮಳೆಯಿಂದ ಕಡಲ್ಕೊರೆತವು ತೀವ್ರವಾಗಿದ್ದು, ಉಳ್ಳಾಲದ ಉಚ್ಚಿಲ ಬಟಪಾಡಿಯಲ್ಲಿ ಬಟಪಾಡಿಯ ಸುಮಾರು 1 ಕಿ.ಮೀ ದೂರದವರೆಗಿನ ರಸ್ತೆ ಸಮುದ್ರಪಾಲಾಗಿದೆ.
ಹವಾಮಾನ ಇಲಾಖೆಯ ಪ್ರಕಾರ ಇಂದು ದಕ್ಷಿಣ ಕನ್ನಡ ಜಿಲ್ಲೆಗೆ ಆರೆಂಜ್ ಅಲರ್ಟ್ ಇದ್ದು, ಭಾರಿ ಮಳೆಯಾಗುವ ಸಾಧ್ಯತೆ ಇದೆ. ಕಳೆದ ಎರಡು ದಿನ ಆರೆಂಜ್ ಅಲರ್ಟ್ ಎಚ್ಚರಿಕೆಯಲ್ಲಿ ಭಾರಿ ಮಳೆ ಸುರಿದಿದೆ. ಈ ಹಿನ್ನೆಲೆಯಲ್ಲಿ ಇಂದೂ ಕೂಡ ಜಿಲ್ಲೆಯಲ್ಲಿನ ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
1. ಧರೆ ಕುಸಿತ: ಮಂಗಳೂರಿನ ಹೊರವಲಯದ ಮೊಂಟುಗೋಳಿಯಲ್ಲಿ ಧರೆ ಕುಸಿದು ರಸ್ತೆಗೆ ಬಿದ್ದಿದೆ. ನಡುಪದವು- ಮೋಂಟುಗೋಳಿ ರಸ್ತೆಯಲ್ಲಿ ಧರೆ ಕುಸಿದು ರಸ್ತೆ ಸಂಪೂರ್ಣ ಬಂದ್ ಆಗಿದೆ. ಹಾಗೆಯೇ ಗುರುಪುರದಲ್ಲಿ ರಾಷ್ಟ್ರೀಯ ಹೆದ್ದಾರಿಯ ಒಂದು ಬದಿಯ ಧರೆ ಕುಸಿಯುತ್ತಿದ್ದು, ಕುಸಿತ ಹೆಚ್ಚಾದರೆ ರಾಷ್ಟ್ರೀಯ ಹೆದ್ದಾರಿ ಸಂಚಾರಕ್ಕೆ ತೊಡಕಾಗುವ ಸಾಧ್ಯತೆ ಇದೆ.
2. ವಿಮಾನಗಳು ಡೈವರ್ಟ್: ಭಾರಿ ಮಳೆಗೆ ನಿನ್ನೆ ಮಂಗಳೂರಿಗೆ ಬರಬೇಕಿದ್ದ ಎರಡು ವಿಮಾನಗಳನ್ನು ಡೈವರ್ಟ್ ಮಾಡಲಾಗಿದೆ. ದುಬೈ ಮತ್ತು ದಮಾಮ್ನಿಂದ ಮಂಗಳೂರಿಗೆ ಬರುತ್ತಿದ್ದ ವಿಮಾನ ಮಂಗಳೂರಿನಲ್ಲಿ ಇಳಿಯಲಾಗದೆ, ಬೆಂಗಳೂರಿಗೆ ಡೈವರ್ಟ್ ಮಾಡಲಾಗಿತ್ತು.
3. ಚರಂಡಿಗೆ ಬಿದ್ದ ಕಾರು: ಉಳ್ಳಾಲದ ಸೋಮೇಶ್ವರದಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಚರಂಡಿಗೆ ಬಿದ್ದಿದೆ. ಬಳಿಕ ಕಾರನ್ನು ಅಗ್ನಿ ಶಾಮಕ ದಳದ ಸಿಬ್ಬಂದಿ ಮೇಲೆತ್ತಿದ್ದಾರೆ.
4. ಕಾರುಗಳಿಗೆ ಹಾನಿ: ಮೂಡಬಿದಿರೆಯಲ್ಲಿ ಧರೆ ಕುಸಿದು ಕಾರುಗಳಿಗೆ ಹಾನಿಯಾದ ಘಟನೆ ನಡೆದಿದೆ. ಇಲ್ಲಿನ ಮೈಟ್ ಕಾಲೇಜು ಕಟ್ಟಡದ ಬಳಿ ಧರೆ ಕುಸಿದಿದ್ದು, ವಿದ್ಯಾರ್ಥಿಗಳ ಮೂರು ಕಾರುಗಳು ಜಖಂಗೊಂಡಿವೆ.
ಇದನ್ನೂ ಓದಿ: ಕರಾವಳಿ, ಮಲೆನಾಡಿನಲ್ಲಿ ಮಳೆ ಅಬ್ಬರ: ಹಲವೆಡೆ ಶಾಲೆ, ಕಾಲೇಜಿಗೆ ರಜೆ ಘೋಷಣೆ