ಬಂಟ್ವಾಳ (ದಕ್ಷಿಣ ಕನ್ನಡ) : ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿಸಿ ರೋಡ್ ನಲ್ಲಿರುವ ಎಸ್ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಮನೆಗೆ ಇಂದು ಬೆಳಗ್ಗೆ ಎನ್ಐಎ ಅಧಿಕಾರಿಗಳ ತಂಡ ಬಂಟ್ವಾಳ ಪೊಲೀಸರ ಸಹಕಾರದಿಂದ ದಾಳಿ ನಡೆಸಿ ವಿಚಾರಣೆ ನಡೆಸಿದೆ. ವಿಚಾರಣೆ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ರಿಯಾಝ್, ನಿಷ್ಪಕ್ಷಪಾತ ತನಿಖೆಗೆ ತಾನು ಸದಾ ಸಿದ್ಧ ಎಂದಿದ್ದಾರೆ.
ಇತ್ತೀಚೆಗೆ ಬಿಹಾರದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಎನ್ಐಎ ಅಧಿಕಾರಿಗಳು ನನ್ನ ಮನೆಗೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ನಾನು ರಾಷ್ಟ್ರೀಯ ಕಾರ್ಯದರ್ಶಿ ಆಗಿದ್ದು, ಬಿಹಾರದ ಉಸ್ತುವಾರಿಯೂ ಆಗಿರುತ್ತೇನೆ. ಅಲ್ಲಿಗೆ ಆಗಾಗ ಹೋಗುತ್ತಿರುತ್ತೇನೆ. ಈ ಹಿನ್ನೆಲೆಯಲ್ಲಿ ಅಲ್ಲಿನ ಘಟನೆಗೂ ತಮಗೂ ಸಂಬಂಧವಿದೆಯೇ ಎಂಬುದನ್ನು ವಿಚಾರಿಸಲು ಬಂದಿದ್ದರು. ಬೆಳಗಿನಿಂದ ಮಧ್ಯಾಹ್ನವರೆಗೂ ವಿಚಾರಣೆ ನಡೆಸಿ, ಕೆಲವೊಂದು ದಾಖಲೆಗಳು ಹಾಗೂ ನನ್ನ ಹಾಗೂ ನನ್ನ ಪತ್ನಿಯ ಮೊಬೈಲ್ ಫೋನುಗಳನ್ನು ಎನ್ಐಎ ಅಧಿಕಾರಿಗಳು ಪಡೆದುಕೊಂಡು ಹೋಗಿದ್ದಾರೆ ಎಂದು ಹೇಳಿದ್ದಾರೆ.
ಹಲವು ಬಾರಿ ಎನ್.ಐ.ಎ, ಇ.ಡಿ, ಎ.ಟಿ.ಎಸ್.ನಂಥ ವಿಶೇಷ ತನಿಖಾ ಸಂಸ್ಥೆಗಳು ಬಿಜೆಪಿಯ ಪರವಾಗಿ ಹಾಗೂ ಆಳುವ ಪಕ್ಷದ ಪರವಾಗಿ ಕೆಲಸ ಮಾಡಿವೆ. ಆದರೆ ಈ ವಿಚಾರದಲ್ಲಿ ನಿಷ್ಪಕ್ಷಪಾತ ತನಿಖೆ ಆಗಬೇಕು. ಯಾವುದೇ ರಾಜಕೀಯ ಪ್ರಭಾವ ಇರಬಾರದು. ಪಾರದರ್ಶಕ ತನಿಖೆ ಆಗಲಿ, ಮುಂಬರುವ ದಿನಗಳಲ್ಲಿ ವಿಚಾರಣೆ ಸಂಬಂಧ ಸಂಪೂರ್ಣ ಸಹಕಾರ ನೀಡುತ್ತೇನೆ ಎಂದರು.
ಇದನ್ನೂ ಓದಿ :SDPIನ 'ತಾಂಟ್ರೆ ನೀ ಬಾ ತಾಂಟ್' ರಿಯಾಜ್ ಪರಂಗಿಪೇಟೆ ಮನೆ ಮೇಲೆ ಎನ್‌ಐಎ ದಾಳಿ