ಬೆಳ್ತಂಗಡಿ(ದಕ್ಷಿಣ ಕನ್ನಡ): ಔಟ್‌ಲುಕ್ ಇತ್ತೀಚೆಗೆ ನಡೆಸಿದ ರಾಷ್ಟ್ರಮಟ್ಟದ ಅತ್ಯುತ್ತಮ ಕಾಲೇಜುಗಳ ಸಮೀಕ್ಷೆಯಲ್ಲಿ ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ವಿವಿಧ ವಿಭಾಗಗಳಿಗೆ ಉತ್ಕೃಷ್ಟ ಮನ್ನಣೆ ಪ್ರಾಪ್ತವಾಗಿದೆ.
ಈ ಸಮೀಕ್ಷೆಯಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗಕ್ಕೆ ರಾಷ್ಟ್ರಮಟ್ಟದಲ್ಲಿ 13ನೇ ಸ್ಥಾನ ದೊರೆತಿದ್ದು, ಬಿಸಿಎಗೆ 17ನೇ ಸ್ಥಾನ, ಸಮಾಜ ಕಾರ್ಯ ವಿಭಾಗಕ್ಕೆ 22ನೇ ಸ್ಥಾನ ಸಿಕ್ಕಿದೆ. ಬಿಬಿಎ ವಿಭಾಗಕ್ಕೆ 32, ವಿಜ್ಞಾನ ವಿಭಾಗಕ್ಕೆ 47, ಕಲಾ ವಿಭಾಗಕ್ಕೆ 68 ಹಾಗೂ ವಾಣಿಜ್ಯ ವಿಭಾಗಕ್ಕೆ 89ನೇ ಸ್ಥಾನದ ಹಿರಿಮೆ ಬಂದಿದೆ.
ಸಮೀಕ್ಷೆಗಾಗಿ ಪತ್ರಿಕೆಯು ಕಾಲೇಜಿನ ವಿವಿಧ ವಿಭಾಗಗಳ ಶೈಕ್ಷಣಿಕ ಚಟುವಟಿಕೆ, ಸಾಧನೆ ಹಾಗೂ ಪಡೆದ ಮನ್ನಣೆಗಳು, ವಿದ್ಯಾರ್ಥಿಗಳ ಪ್ರವೇಶಾತಿ ಪ್ರಮಾಣ, ಪರೀಕ್ಷಾ ಫಲಿತಾಂಶ, ಶುಲ್ಕ ವಿವರ, ಲಭ್ಯವಿರುವ ಸೌಲಭ್ಯಗಳು ಹಾಗೂ ಕಾಲೇಜಿನಲ್ಲಿರುವ ವಿದ್ಯಾರ್ಥಿಗಳ ಶೈಕ್ಷಣಿಕ, ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿರುವ ಸೌಲಭ್ಯಗಳು ಹಾಗೂ ಕ್ರೀಡೆ, ಸಾಂಸ್ಕೃತಿಕ, ಸಾಹಿತ್ಯಿಕ ಚಟುವಟಿಕೆಗಳಲ್ಲಿ ರಾಜ್ಯ, ರಾಷ್ಟ್ರಮಟ್ಟದಲ್ಲಿ ಪಡೆದ ಪ್ರಶಸ್ತಿಗಳು, ಸಂಶೋಧನಾ ಚಟುವಟಿಕೆಗಳು ಮುಂತಾದ ಸಮಗ್ರ ವಿವರಗಳನ್ನು ಕಲೆಹಾಕಿ ಅತ್ಯುತ್ತಮ ಕಾಲೇಜುಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಸೆಪ್ಟೆಂಬರ್ 7 ರ ಸಂಚಿಕೆಯಲ್ಲಿ ಸಮೀಕ್ಷಾ ಫಲಿತಾಂಶಗಳನ್ನು ಪ್ರಕಟಿಸಿರುವ ಔಟ್‌ಲುಕ್ ಅತ್ಯುತ್ತಮ ಕಾಲೇಜುಗಳ ಆಯ್ಕೆಯ ಮಾನದಂಡ ಮತ್ತು ಪ್ರಕ್ರಿಯೆಯ ಸಮಗ್ರ ವಿವರಗಳನ್ನು ತಿಳಿಸಿದೆ. ಉಜಿರೆ ಕಾಲೇಜಿನ ಈ ಸಾಧನೆಯ ಬಗ್ಗೆ ಸಂಸ್ಥೆಯ ಅಧ್ಯಕ್ಷರಾದ ಡಾ. ವೀರೇಂದ್ರ ಹೆಗ್ಗಡೆ, ಕಾರ್ಯದರ್ಶಿಗಳಾದ ಡಿ. ಹರ್ಷೇಂದ್ರ ಕುಮಾರ್ ಹಾಗೂ ಡಾ.ಬಿ. ಯಶೋವರ್ಮ ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ಕಳೆದ ಮೂರು ತಿಂಗಳ ಹಿಂದೆ ರಾಷ್ಟ್ರಮಟ್ಟದ ಇನ್ನೊಂದು ಪ್ರಸಿದ್ಧ ವಾರಪತ್ರಿಕೆ ಇಂಡಿಯಾ ಟುಡೇ ನಡೆಸಿದ ರಾಷ್ಟ್ರಮಟ್ಟದ ಅತ್ಯುತ್ತಮ ಕಾಲೇಜುಗಳ ಸಮೀಕ್ಷೆಯಲ್ಲೂ ಎಸ್‌ಡಿಎಂ ಕಾಲೇಜು ದೇಶದ ಶ್ರೇಷ್ಠ 100 ಕಾಲೇಜುಗಳ ಪಟ್ಟಿಯಲ್ಲಿ ಸ್ಥಾನ ಪಡೆದಿತ್ತು. ಸಂಸ್ಥೆಯ ಆಡಳಿತ ಮಂಡಳಿಯ ಸೂಕ್ತ ಮಾರ್ಗದರ್ಶನ, ಪ್ರೋತ್ಸಾಹ ಹಾಗೂ ಬೋಧಕ-ಬೋಧಕೇತರ ಸಿಬ್ಬಂದಿಯ ಸಾಂಘಿಕ ಪ್ರಯತ್ನ, ವಿದ್ಯಾರ್ಥಿಗಳ ಸಕ್ರಿಯ ಪಾಲ್ಗೊಳ್ಳುವಿಕೆಯ ಅಂಶಗಳು ಈ ಮನ್ನಣೆ ಲಭಿಸಲು ಸಹಾಯಕವಾಗಿವೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ. ಸತೀಶ್ಚಂದ್ರ ಎಸ್. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.