ಬೆಳ್ತಂಗಡಿ: ಇಲ್ಲಿನ ಲಾಯಿಲದ ಸರ್ಕಾರಿ ಶಾಲೆಯಲ್ಲಿ ನಡೆದ ಅಸ್ಪ್ರಶ್ಯತೆಯ ವಿಚಾರದಲ್ಲಿ ತಾಲೂಕು ಆಡಳಿತ ಹಾಗೂ ಶಿಕ್ಷಣ ಇಲಾಖೆ ಬೇಜವಾಬ್ದಾರಿಯಿಂದ ಕಾರ‍್ಯನಿರ್ವಹಿಸಿದೆ. ನೊಂದ ಮಕ್ಕಳಲ್ಲಿ ಹಾಗೂ ಅವರ ಕುಟುಂಬಗಳಲ್ಲಿ ವಿಶ್ವಾಸ ತುಂಬುವಲ್ಲಿ ಇವರು ಸಂಪೂರ್ಣ ವಿಫಲರಾಗಿದ್ದಾರೆ ಎಂದು ಪರಿಶಿಷ್ಟ ಜಾತಿ, ಪಂಗಡಗಳ ಕುಂದುಕೊರತೆ ಸಭೆಯಲ್ಲಿ ಒತ್ತಾಯಿಸಲಾಯಿತು.
ಲಾಯಿಲ ಸರ್ಕಾರಿ ಶಾಲೆಯಲ್ಲಿನ ಶಿಕ್ಷಕರು ದಲಿತ ಮಕ್ಕಳನ್ನು ಬಿಟ್ಟು ಉಳಿದ ಮಕ್ಕಳನ್ನು ಸಮೀಪದ ಮೇಲ್ಜಾತಿಯವರ ಮನೆಯ ಗೃಹಪ್ರವೇಶ ಕಾರ‍್ಯಕ್ರಮಕ್ಕೆ ಕರೆದುಕೊಂಡು ಹೋಗಿ ಅಸ್ಪ್ರಶ್ಯತೆಯನ್ನು ಪ್ರದರ್ಶಿಸಿದ ವಿಚಾರವನ್ನು ಸಭೆಯಲ್ಲಿ ಪ್ರಸ್ತಾಪಿಸಲಾಯಿತು. ಘಟನೆಯನ್ನು ಮರೆಮಾಚುವ ಹಾಗೂ ಸಣ್ಣ ವಿಚಾರವೆಂದು ಮುಗಿಸಿ ಹಾಕುವ ಪ್ರಯತ್ನಕ್ಕೆ ಅಧಿಕಾರಿಗಳು ಮುಂದಾಗಿದ್ದರೆಯೇ ಹೊರತು ನೊಂದವರಿಗೆ ನ್ಯಾಯ ಕೊಡಲು ಯಾರೂ ಮುಂದೆ ಬರಲಿಲ್ಲ ಎಂದು ಮುಖಂಡರುಗಳು ಆರೋಪಿಸಿದರು.
ಈ ಬಗ್ಗೆ ಮಾತನಾಡಿದ ಜಿ.ಪಂ ಸದಸ್ಯ ಶೇಖರ ಕುಕ್ಕೇಡಿ ಅವರು, ಈ ಹಿಂದೆ ತಾಲೂಕಿನ ಅಂಗನವಾಡಿ ಕೇಂದ್ರವೊಂದರಲ್ಲಿ ದಲಿತ ಸಮುದಾಯದ ಮಕ್ಕಳ ಬಟ್ಟಲುಗಳನ್ನು ಪ್ರತ್ಯೇಕ ಇಡುತ್ತಿರುವ ವಿಚಾರ ಗಮನಕ್ಕೆ ಬಂದಿದ್ದು ಅಂತಹ ಇನ್ನೂ ಕೆಲವು ಪ್ರಕರಣಗಳು ನಡೆದಿತ್ತು. ಆದರೆ ಈ ಯಾವುದೇ ವಿಚಾರಗಳ ಬಗ್ಗೆ ಸರಿಯಾಗಿ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗಿಲ್ಲ ಅದರ ಮುಂದುವರಿದ ಭಾಗವಾಗಿಯೇ ಲಾಯಿಲ ಶಾಲೆಯಲ್ಲಿ ಈ ಘಟನೆ ನಡೆದಿದೆ. ಇನ್ನು ಇಂತಹ ಘಟನೆಗಳಿಗೆ ಅವಕಾಶ ನೀಡಬಾರದು ಎಂದು ಎಚ್ಚರಿಸಿದರು.