ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಇದಕ್ಕಾಗಿ ಜಿಲ್ಲಾಡಳಿತ ಲಾಕ್ಡೌನ್ನಂಥ ಪರಿಹಾರೋಪಾಯಗಳನ್ನು ಜಾರಿಗೆ ತರುತ್ತಿದೆ. ಈ ಮಧ್ಯೆ ಕೊರೊನಾ ಸಮಯದಲ್ಲಿ ಮುನ್ನೆಲೆಗೆ ಬಂದಿರುವ ಆಯುರ್ವೇದದ ಪರಿಹಾರೋಪಾಯಗಳನ್ನು ಮುಂದಿಟ್ಟುಕೊಂಡು ಶಾಸಕ ಸಂಜೀವ ಮಠಂದೂರು ಹೊಸ ಯೋಜನೆಯೊಂದನ್ನು ರೂಪಿಸಿದ್ದಾರೆ.
ಕೊರೊನಾ ತಡೆಗಟ್ಟಲು ಆಯುರ್ವೇದ ಮದ್ದು ಹಾಗೂ ಮನೆ ಮದ್ದು ಉಪಯೋಗಿಸುವಂತೆ ಪ್ರಧಾನಿ ನರೇಂದ್ರ ಮೋದಿಯವರು ಜನತೆಗೆ ಕರೆ ನೀಡಿದ್ದಾರೆ. ಹೀಗಾಗಿ ತಾಲೂಕಿನಲ್ಲಿ ಸಂಜೀವ ಮಠಂದೂರು ಅವರ ಮುಂದಾಳತ್ವದಲ್ಲಿ ನಗರಸಭೆಯ ಮೂವತ್ತೊಂದು ವಾರ್ಡ್ನ ಮನೆಗಳಿಗೆ ಸುಮಾರು ಒಂದು ಲಕ್ಷದಷ್ಟು ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಯುರ್ವೇದ ಮಾತ್ರೆಗಳನ್ನು ಹಂಚುವ ಯೋಜನೆಗೆ ಸೋಮವಾರ ಚಾಲನೆ ದೊರಕಲಿದೆ.
ಪ್ರಧಾನಿ ನರೇಂದ್ರ ಮೋದಿ, ದೇಶದಲ್ಲಿರುವ ಆಯುರ್ವೇದ ಹಳ್ಳಿ ಪದ್ಧತಿಯಂತೆ ಮನೆ ಮದ್ದು ಅನುಸರಿಸುವಂತೆ ಸಲಹೆ ನೀಡಿದ್ದಾರೆ. ಇಂತಹ ಸಂದರ್ಭದಲ್ಲಿ ಸಾವಿರಾರು ಮಂದಿ ಗ್ರಾಮೀಣ ಭಾಗದಲ್ಲಿ ಆಯುರ್ವೇದ ವೈದ್ಯರಿದ್ದಾರೆ. ಇವರ ಸಹಕಾರ ಪಡೆದುಕೊಂಡು ತಮ್ಮ ಆರೋಗ್ಯವನ್ನು ಕಾಪಾಡುವ ಜೊತೆಯಲ್ಲಿ ಇತರರಿಗೂ ಮಾಡೆಲ್ ಆಗುವ ದೃಷ್ಟಿಯಿಂದ ರೋಗ ನಿರೋಧಕ ಶಕ್ತಿ ವೃದ್ಧಿಸುವ ಕೆಲಸ ಮಾಡಬೇಕು. ಇದಕ್ಕೆ ಪೂರಕವಾಗಿ ನಗರಸಭೆಯ ಒಂದು ಸಾವಿರ ಮನೆಗಳಿಗೆ 1 ಲಕ್ಷ ಮಾತ್ರೆಗಳನ್ನು ಪುತ್ತೂರಿನ ಆಯುರ್ವೇದ ತಜ್ಞ ಡಾ. ಹರಿಕೃಷ್ಣ ಪಾಣಾಜೆ ಅವರು ಸಿದ್ಧಪಡಿಸಿದ್ದಾರೆ ಎಂದು ಶಾಸಕ ಮಠಂದೂರು ತಿಳಿಸಿದ್ದಾರೆ.
ಮಾತ್ರೆಗಳನ್ನು ವಿತರಿಸುವುದರ ಜೊತೆಗೆ ಔಷಧಿಯ ಕುರಿತ ವಿವರಣೆ ಹಾಗೂ ಕರಪತ್ರದ ವಿತರಣೆಯು ಜರುಗಲಿದೆ. ಇದು ಕೇವಲ ನಗರಸಭೆ ವ್ಯಾಪ್ತಿಗೆ ಮಾತ್ರ ಸೀಮಿತವಾಗಿರದೆ ತಾಲೂಕಿನಾದ್ಯಂತ ಮಾತ್ರೆಯ ವಿತರಣೆ ನಡೆಯಲಿದೆ. ಆದರೆ ಮೊದಲನೆ ಹಂತದಲ್ಲಿ ಪ್ರಾಯೋಗಿಕವಾಗಿ ನಗರಸಭೆಯ ಮೂವತ್ತೊಂದು ವಾರ್ಡ್ಗಳಿಗೆ ಮಾತ್ರೆಯ ವಿತರಣೆ ಕಾರ್ಯಕ್ರಮ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.
ಆಯುಷ್ ಕ್ವಾಥ್, ಆರೋಗ್ಯ ರಕ್ಷಕ ಮಾತ್ರೆಗಳು:
ಡಾ. ಹರಿಕೃಷ್ಣ ಪಾಣಾಜೆಯವರು ಸಿದ್ಧಪಡಿಸಿರುವ ಎರಡು ರೀತಿಯ ಮಾತ್ರೆಗಳನ್ನು ಜನರಿಗೆ ಹಂಚಲಾಗುತ್ತದೆ. ಆಯುಷ್ ಕ್ವಾಥ್ ಮತ್ತು ಆರೋಗ್ಯ ರಕ್ಷಕ್ ಎಂಬ ಹೆಸರಿನ ಮಾತ್ರೆಗಳನ್ನು ರೋಗ ನಿರೋಧಕ ಶಕ್ತಿ ಹೆಚ್ಚಿಸಲು ನೀಡಲಾಗುತ್ತದೆ. ಈ ಮಾತ್ರೆಗಳನ್ನು ಶುಂಠಿ, ಮೆಣಸು, ತುಳಸಿ ಮುಂತಾದ ಗಿಡ ಮೂಲಿಕೆಗಳನ್ನು ಬಳಸಿ ತಯಾರಿಸಲಾಗಿದೆ. ಆಯುಷ್ ಕ್ವಾಥ್ ಎಂಬ ಮಾತ್ರೆಯನ್ನು ಬೆಳಗ್ಗೆ ಹಾಗೂ ಆರೋಗ್ಯ ರಕ್ಷಕ್ ಮಾತ್ರೆಯನ್ನು ರಾತ್ರಿ ತಲಾ ಒಂದರಂತೆ ಒಂದು ತಿಂಗಳು ಅಥವಾ ಎರಡು ತಿಂಗಳು ಸೇವಿಸಬೇಕಾಗುತ್ತದೆ.
ಭಾರತ ಸರ್ಕಾರವೇ ಈ ಮದ್ದನ್ನು ಇಮ್ಯುನಿಟಿ ಹೆಚ್ಚಿಸಲು ಉತ್ತಮವಾದ ಮಾತ್ರೆ ಎಂದು ಪ್ರಮಾಣೀಕರಿಸಿರುವುದರಿಂದ ಯಾವುದೇ ಭಯವಿಲ್ಲದೆ ಈ ಮಾತ್ರೆ ಸೇವಿಸಬಹುದಾಗಿದೆ. ಈಗಾಗಲೇ ಡಾ. ಹರಿಕೃಷ್ಣ ಪಾಣಾಜೆ ಅವರ ಫಾರ್ಮಸಿಯಲ್ಲಿ ಮಾತ್ರೆಗಳು ತಯಾರಾಗಿದ್ದು, ಸೋಮವಾರದಂದು ನಗರಸಭೆ ಸದಸ್ಯರ ಮುಖಾಂತರ ಮಾತ್ರೆಗಳ ಹಂಚಿಕೆ ಕಾರ್ಯಕ್ರಮ ನಡೆಯಲಿದೆ.
ಶಾಸಕರಿಂದ ಮಾತ್ರೆ ಉತ್ಪಾದನಾ ಘಟಕ ವೀಕ್ಷಣೆ:
ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಮಾತ್ರೆ ತಯಾರಿಕಾ ಘಟಕವಾಗಿರುವ ಕುರಿಯದ ಡಾ. ಹರಿಕೃಷ್ಣ ಪಾಣಾಜೆ ಅವರ ಮಾಲಿಕತ್ವದ ಎಸ್.ಡಿ.ಪಿ. ರೆಮಿಡೀಸ್ & ರಿಸರ್ಚ್ ಸೆಂಟರ್ ಆಯುರ್ವೇದಿಕ್ ಔಷಧಿಗಳ ಉತ್ಪಾದನಾ ಘಟಕಕ್ಕೆ ಶಾಸಕ ಸಂಜೀವ ಮಠಂದೂರು ಜು.15 ರಂದು ಭೇಟಿ ನೀಡಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಪುತ್ತೂರು ಬಿಜೆಪಿ ಗ್ರಾಮಾಂತರ ಮಂಡಲ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಮುಂಗ್ಲಿಮನೆ, ಬಿಜೆಪಿ ಗ್ರಾಮಾಂತರ ಮಂಡಲ ಉಪಾಧ್ಯಕ್ಷ ಹರಿಪ್ರಸಾದ ಯಾದವ್, ಸಹಕಾರ ಭಾರತಿ ತಾಲೂಕು ಅಧ್ಯಕ್ಷ ಕೃಷ್ಣಕುಮಾರ್ ರೈ, ಬಿಜೆಪಿ ಪ್ರಮುಖ ರಾಮದಾಸ್ ಹಾರಾಡಿ ಮುಂತಾದವರು ಉಪಸ್ಥಿತರಿದ್ದರು.