ಉಳ್ಳಾಲ : ರಾಷ್ಟ್ರೀಯ ಹೆದ್ದಾರಿ ತಪ್ಪಿಸಿ ಕಳ್ಳ ದಾರಿಯಾಗಿ ಒಳರಸ್ತೆ ಮೂಲಕ ಮರಳು ಸಾಗಾಟ ನಡೆಸುತ್ತಿದ್ದ ಟಿಪ್ಪರ್ ಲಾರಿಯೊಂದು ದೇವಿಪುರ ದೇವಸ್ಥಾನದ ಬಳಿ ಅಪಘಾತಕ್ಕೀಡಾಗಿದೆ. ಚಾಲಕನ ನಿಯಂತ್ರಣ ತಪ್ಪಿ ತೆಂಗಿನ ಮರಕ್ಕೆ ಗುದ್ದಿದ ಪರಿಣಾಮ ಮರ ಉರುಳಿ ಬಿದ್ದು ಟಿಪ್ಪರ್ ಪಲ್ಟಿಯಾಗಿದೆ.
ಟಿಪ್ಪರ್ ದೇವಿಪುರ ದೇವಸ್ಥಾನಕ್ಕೆ ಡಿಕ್ಕಿ ಹೊಡೆಯುವುದರಿಂದ ಸ್ವಲ್ಪದರಲ್ಲೇ ತಪ್ಪಿದೆ. ದೇವಸ್ಥಾನದಿಂದ ಹೊರ ಬರುತ್ತಿದ್ದ ಮಹಿಳೆಯೊಬ್ಬರು ಪವಾಡ ಸದೃಶ ಪಾರಾಗಿದ್ದಾರೆ. ಕೇರಳ ಕಡೆಯತ್ತ ಅಕ್ರಮವಾಗಿ ಮರಳು ಸಾಗಿಸುವಾಗ ಈ ಘಟನೆ ನಡೆದಿದೆ ಅನ್ನೋ ಆರೋಪ ಸ್ಥಳೀಯರಿಂದ ಕೇಳಿ ಬಂದಿದೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಕೋವಿಡ್ ಚೆಕ್ ಪಾಯಿಂಟ್ ಆರಂಭಗೊಂಡಿದೆ. ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಇದನ್ನು ತಪ್ಪಿಸಿ ಚಾಲಕ ಒಳ ರಸ್ತೆಯ ಮುಖೇನ ಮರಳು ಸಾಗಾಟ ನಡೆಸುತ್ತಿದ್ದ ಅನ್ನುವ ಆರೋಪ ಕೇಳಿ ಬಂದಿದೆ.
ರಾತ್ರಿ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ದೇವಿಪುರ ರಸ್ತೆಯಾಗಿ ತೆರಳುವ ಮರಳು ಲಾರಿಗಳು ಇದೀಗ ಹಗಲು ಹೊತ್ತಿನಲ್ಲಿಯೂ ಸಂಚರಿಸಲು ಆರಂಭವಾಗಿದೆ. ಸ್ಥಳೀಯರು ಮರಳು ಮಾಫಿಯಾ ವಿರುದ್ಧ ದೂರು ನೀಡಲು ಹೆದರುತ್ತಿದ್ದಾರೆ. ಇದರಿಂದ ಮರಳು ಮಾಫಿಯಾದವರ ಅಟ್ಟಹಾಸ ಕೇಳುವವರಿಲ್ಲವಾಗಿದೆ. ಅಪಘಾತದ ಕುರಿತು ನಾಗುರಿ ಸಂಚಾರಿ ಠಾಣೆಗೆ ಸ್ಥಳೀಯರು ದೂರು ದಾಖಲಿಸಿದ್ದಾರೆ.