ಮಂಗಳೂರು: ಯುವತಿಯರ ಸರಣಿ ಹಂತಕ ಸೈನೈಡ್ ಮೋಹನ್ಗೆ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಆತನ 16ನೇ ಯುವತಿಯ ಕೊಲೆ ಹಾಗೂ ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ತೀರ್ಪು ನೀಡಿ ಆದೇಶ ಪ್ರಕಟಿಸಿದೆ. ಅದು ಒಂದಲ್ಲ 16 ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಸೈನೈಡ್ ಮೋಹನ್‌ಕುಮಾರ್ ಗೆ 2007ರಲ್ಲಿ ಕಾಸರಗೋಡು ತಾಲೂಕಿನ ಉಪ್ಪಳ ಬಸ್ ತಂಗುದಾಣದಲ್ಲಿ ಬೇಕೂರಿನ 33 ವರ್ಷದ ಯುವತಿಯೊಬ್ಬಳು ಪರಿಚಯವಾಗುತ್ತಾಳೆ. ಮೇ.28ರಂದು ಮಂಗಳೂರಿನಲ್ಲಿ ಆಡಿಯೋ ರೆಕಾರ್ಡ್ ಮಾಡಲಿಕ್ಕಿದೆಯೆಂದು ಹೇಳಿ ಮನೆಯಿಂದ ಯುವತಿ ಹೊರ ಹೋಗಿದ್ದಳು. ಅಲ್ಲಿಂದ ಯುವತಿಯೊಂದಿಗೆ ಮೋಹನ್‌ಕುಮಾರ್ ಬೆಂಗಳೂರಿಗೆ ತೆರಳಿ ವಸತಿಗೃಹವೊಂದರಲ್ಲಿ ರೂಮು ಪಡೆದುಕೊಂಡಿದ್ದ. ಮೇ.29ರಂದು ಬೆಳಗ್ಗೆ ಮೋಹನ್ ಯುವತಿ ಬಳಿ ಪೂಜೆಗೆ ಹೋಗಲಿಕ್ಕಿದೆ, ಪೂಜೆ ಮಾಡುವಾಗ ನಿನ್ನಲ್ಲಿ ಯಾವುದೇ ಆಭರಣ ಇರಬಾರದೆಂದು ಅವೆಲ್ಲವನ್ನೂ ತೆಗೆದಿಡುವಂತೆ ಹೇಳಿದ್ದಾನೆ. ಬಳಿಕ ಆಕೆಗೆ ಗರ್ಭಿಣಿಯಾಗದಂತೆ ತಡೆಯಲು ಮಾತ್ರೆ ಸೇವಿಸುವಂತೆ ಹೇಳಿ ಸೈನೈಡ್ ನೀಡಿದ್ದಾನೆ. ಇದನ್ನು ನಂಬಿದ ಯುವತಿ ಮಾತ್ರೆ ಎಂದು ಸೈನೈಡ್ ಅನ್ನು ಸೇವಿಸಿ ಶೌಚಾಲಯದಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾಳೆ.
ಯುವತಿ ಮನೆಯವರು ಮೋಹನ್ ಜೊತೆಗೆ ಮದುವೆಯಾಗಿದ್ದಾಳೆಂದು ಎಣಿಸಿ ಪೊಲೀಸ್ ಠಾಣೆಗೆ ನಾಪತ್ತೆ ಬಗ್ಗೆ ದೂರು ನೀಡಿರಲಿಲ್ಲ. ಆದರೆ, 2009ರಲ್ಲಿ ಮೋಹನ್ ಬಂಧನವಾಗಿ ಟಿವಿಯಲ್ಲಿ ವರದಿಯಾಗುತ್ತಿದ್ದಂತೆ ಆತನ ಗುರುತು ಕಂಡು ಹಿಡಿಯುತ್ತಾರೆ. ಬಳಿಕ ಯುವತಿಯ ಸಹೋದರಿ ಬೆಂಗಳೂರಿನ ಉಪ್ಪಾರ ಠಾಣೆಯಲ್ಲಿ ನಾಪತ್ತೆ ದೂರು ನೀಡುತ್ತಾರೆ. 2009 ಅಕ್ಟೋಬರ್ 26ರಂದು ಬರಿಮಾರು ಯುವತಿಯೊಬ್ಬಳ ಕೊಲೆ ಪ್ರಕರಣದ ತನಿಖೆ ನಡೆಸುತ್ತಿದ್ದಾಗ ಆರೋಪಿ ಮೋಹನ ಮಂಜೇಶ್ವರದ ಯುವತಿಯ ಕೊಲೆ ಮಾಡಿದ ಬಗ್ಗೆ ಬಾಯ್ಬಿಟ್ಟಿದ್ದಾನೆ. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಸಯಿದುನ್ನೀಸಾ 38 ಸಾಕ್ಷಿ ವಿಚಾರಣೆ ನಡೆಸಿ, 49 ದಾಖಲೆ ಪರಿಗಣಿಸಿ ಅಪರಾಧ ಸಾಬೀತುಪಡಿಸಿ ತೀರ್ಪು ನೀಡಿದ್ದಾರೆ.
ಆರೋಪ ಸಾಬೀತು: ಐಪಿಸಿ ಸೆಕ್ಷನ್ 302ರ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಮತ್ತು 25 ಸಾವಿರ ರೂ. ದಂಡ, ದಂಡ ತೆರಲು ತಪ್ಪಿದಲ್ಲಿ 1 ವರ್ಷದ ಸಾದಾ ಸಜೆ. ಸೆ. 328ರ ವಿಷ ನೀಡಿದ ಪ್ರಕರಣದಲ್ಲಿ 10 ವರ್ಷ ಸಜೆ ಮತ್ತು 5 ಸಾವಿರ ರೂ. ದಂಡ, ದಂಡ ತೆರಲು ತಪ್ಪಿದಲ್ಲಿ 6 ತಿಂಗಳ ಶಿಕ್ಷೆ. ಸೆ.392ರ ಸುಲಿಗೆ ಪ್ರಕರಣದಲ್ಲಿ 5 ವರ್ಷ ಶಿಕ್ಷೆ ಮತ್ತು 5 ಸಾವಿರ ರೂ. ದಂಡ, ದಂಡ ತೆರಲು ತಪ್ಪಿದಲ್ಲಿ 1 ವರ್ಷದ ಶಿಕ್ಷೆ ವಿಧಿಸಲಾಗಿದೆ. ಸೆ.394ರ ಸುಲಿಗೆ ಮಾಡುವ ಉದ್ದೇಶದಿಂದ ವಿಷಪ್ರಾಷನ ಮಾಡಿಸಿದ ಪ್ರಕರಣದಲ್ಲಿ 10 ವರ್ಷ ಶಿಕ್ಷೆ ಮತ್ತು 5 ಸಾವಿರ ರೂ. ದಂಡ, ದಂಡ ತೆರಲು ತಪ್ಪಿದಲ್ಲಿ 2 ವರ್ಷ ಶಿಕ್ಷೆ ವಿಧಿಸಲಾಗಿದೆ. ಸೆಕ್ಷನ್ 417ರ ಮೋಸ ಪ್ರಕರಣದಲ್ಲಿ 1 ವರ್ಷ ಶಿಕ್ಷೆ ವಿಧಿಸಲಾಗಿದೆ. ಸೆ. 201ರ ಸಾಕ್ಷಿ ನಾಶದಲ್ಲಿ 7 ವರ್ಷ ಶಿಕ್ಷೆ ಮತ್ತು 5 ಸಾವಿರ ರೂ. ದಂಡ, ದಂಡ ತೆರಲು ತಪ್ಪಿದಲ್ಲಿ 1 ವರ್ಷ ಶಿಕ್ಷೆ ವಿಧಿಸಲಾಗಿದೆ. ಅಲ್ಲದೆ, ಮೃತ ಯುವತಿಯ ತಾಯಿಗೆ ಸರಕಾರದಿಂದ ಪರಿಹಾರ ಕೊಡಲು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಆದೇಶಿಸಿದೆ.