ಮಂಗಳೂರು: ನೀರಿನ ಸಂರಕ್ಷಣೆಗೆ ರೋಟರಿ ಸಂಸ್ಥೆಯು ಸಾಕಷ್ಟು ಪರಿಶ್ರಮ ಪಡುತ್ತಿದೆ. ಇದೀಗ ರಾಷ್ಟ್ರ ಮಟ್ಟದಲ್ಲಿ 'ಇಂಡಿಯಾ ವಾಟರ್ ಮಿಶನ್' ಎಂಬ ಸಂಸ್ಥೆಯನ್ನು ಪ್ರಾರಂಭಿಸಿದೆ. ಇದರ ಜೊತೆಗೆ ಹೊಸದಾಗಿ ಯೂಟ್ಯೂಬ್ ಚಾನಲ್ಗೆ ಚಾಲನೆ ನೀಡಲಾಯಿತು.
ಕೋವಿಡ್ ಸಮಸ್ಯೆಯಿಂದ ಜಲ ಸಂರಕ್ಷಣೆ ಬಗ್ಗೆ ಜನಸಾಮಾನ್ಯರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸಲು ಸಾಧ್ಯವಾಗುತ್ತಿಲ್ಲ. ಈ ಸಂಬಂಧ 'ನೀರೇ ಜೀವನ' ಎಂಬ ಯೂಟ್ಯೂಬ್ ಚಾನಲ್ ಮೂಲಕ ವಿಡಿಯೋ ಸಹಿತ ವಿಸ್ತೃತ ಮಾಹಿತಿ ನೀಡುವ ವಿಶಿಷ್ಟ ಪರಿಕಲ್ಪನೆಯನ್ನು ಆರಂಭಿಸಲಾಗಿದೆ.
ಈ ಕುರಿತಂತೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಕಾರ್ಯ ನಿರ್ವಾಹಕ ನಿರ್ದೇಶಕ ರಾಜೇಂದ್ರ ಕಲ್ಬಾವಿ, ನೀರಿನ ಮಹತ್ವವನ್ನು ಜನರಿಗೆ ತಿಳಿಸುವ ಉದ್ದೇಶದಿಂದ ಪ್ರತಿ ವಾರ ನೀರಿಗೆ ಸಂಬಂಧಪಟ್ಟ ವಿಡಿಯೋ ಅಪ್ಲೋಡ್ ಮಾಡುವ ಗುರಿ ಹೊಂದಲಾಗಿದೆ. ಆದರೆ ವರ್ಷದಲ್ಲಿ ಕನಿಷ್ಠ 25 ಕಂತುಗಳಲ್ಲಿ ಕಾರ್ಯಕ್ರಮಗಳನ್ನಾದರೂ ಯೂಟ್ಯೂಬ್ ಮೂಲಕ ಜನರಿಗೆ ತಲುಪಿಸುವ ಸದುದ್ದೇಶ ಇದೆ. ಪ್ರಾರಂಭದ ಐದಾರು ಕಂತುಗಳಲ್ಲಿ ರೋಟರಿ ಸಂಸ್ಥೆ ಯಾವ ಉದ್ದೇಶಕ್ಕಾಗಿ ಈ ಯೋಜನೆಯನ್ನು ಕೈಗೊಂಡಿದೆ ಎಂದು ಹೇಳಲಾಗುತ್ತಿದ್ದು, ಬಳಿಕ ನೀರು ಇಂಗಿಸುವಿಕೆ, ಮಳೆ ನೀರು ಕೊಯ್ಲು, ಜಲ ಸಂರಕ್ಷಣೆ ಸೇರಿದಂತೆ ಮುಂತಾದ ಉಪಯುಕ್ತ ಕಾರ್ಯಕ್ರಮಗಳನ್ನು ಬಿತ್ತರಿಸಲಾಗುತ್ತದೆ ಎಂದರು.
ಇತ್ತೀಚಿನ ಮಾಹಿತಿಯಂತೆ ನಮ್ಮ ದೇಶದಲ್ಲಿ ಬರಗಾಲ ಪೀಡಿತ ರಾಜ್ಯಗಳು ಹೆಚ್ಚಾಗುತ್ತಿದ್ದು, 2002ರಲ್ಲಿ 26% ಜಿಲ್ಲೆಗಳು ಬರಪೀಡಿತವಾಗಿದ್ದರೆ, 2019ರ ವೇಳೆಗೆ 42% ಜಿಲ್ಲೆಗಳು ಬರಪೀಡಿತವಾಗಿವೆ. ಆದ್ದರಿಂದ ರಾಷ್ಟ್ರೀಯ ಮಟ್ಟದಲ್ಲಿ ರೋಟರಿ ಸಂಸ್ಥೆಯು 'ಇಂಡಿಯಾ ವಾಟರ್ ಮಿಶನ್' ಎಂಬ ಸಂಸ್ಥೆಯನ್ನು ಪ್ರಾರಂಭಿಸಿದೆ. ಈ ಸಂಸ್ಥೆಯು ಸರ್ಕಾರದ ವಿವಿಧ ಇಲಾಖೆಗಳೊಂದಿಗೆ ಕೈಜೋಡಿಸಿ ಜಲಸಂರಕ್ಷಣೆಯ ಬಗ್ಗೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದೆ ಎಂದರು.
ಈ ಮೂಲಕ ಜಲಾನಯನ ಪ್ರದೇಶಾಭಿವೃದ್ಧಿ, ಮಾಹಿತಿ ವಿನಿಮಯ, ಕೆರೆ ಅಭಿವೃದ್ಧಿ, ನೀರಿನ ಮಿತ ಬಳಕೆ ಮತ್ತು ಮಳೆ ನೀರು ಕೊಯ್ಲು ಮುಂತಾದ ಉದ್ದೇಶಗಳೊಂದಿಗೆ ಕಾರ್ಯ ನಿರ್ವಹಿಸುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.