ಮಂಗಳೂರು : ನಗರದಲ್ಲಿ ನಡೆದ ಎರಡು ದರೋಡೆ ಪ್ರಕರಣಗಳ ಬೆನ್ನತ್ತಿದ್ದ ಪೊಲೀಸರಿಗೆ ಭೂಗತ ಪಾತಕಿ ರವಿ ಪೂಜಾರಿ ಬೆಂಬಲಿಗರನ್ನು ಹತ್ಯೆ ಮಾಡಲು ಸ್ಕೆಚ್ ಹಾಕಿದ್ದ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ನಗರ ಪೊಲೀಸ್ ಆಯುಕ್ತ ಶಶಿಕುಮಾರ್, ನಗರದ ನೀರುಮಾರ್ಗ ಮತ್ತು ಕುಲಶೇಖರದಲ್ಲಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಇಬ್ಬರನ್ನು ದರೋಡೆ ಮಾಡಿ ಬೈಕ್ ಸಮೇತ ಪರಾರಿಯಾಗಿದ್ದ ಆರೋಪಿಗಳನ್ನು ಬಂಧಿಸಿದಾಗ, ಆರೋಪಿಗಳು ರವಿ ಪೂಜಾರಿ ಬೆಂಬಲಿಗರ ಹತ್ಯೆಗೆ ಸಂಚು ರೂಪಿಸಿರುವ ವಿಚಾರ ಬಯಲಾಗಿದೆ. ಕುಲಶೇಖರ ನಿವಾಸಿ ದೀಕ್ಷಿತ್ (32), ಸೋಮೇಶ್ವರದ ಚಂದ್ರಹಾಸ್ (34), ಕೋಟೆಕಾರ್ನ ಪ್ರಜ್ವಲ್, ಸುರತ್ಕಲ್ ಚೇಳಾರ್ನ ಸಂತೋಷ್ ಪೂಜಾರಿ ಯಾನೆ ನಾಯಿ ಸಂತು (38) ಬಂಧಿತರು. ಈ ಪೈಕಿ ಚಂದ್ರಹಾಸ ಎಂಬಾತ ಮುಂಬೈನಲ್ಲಿ ನಡೆದ ಅಪರಾಧ ಪ್ರಕರಣವೊಂದರಲ್ಲಿ 8 ವರ್ಷ ಜೈಲು ಶಿಕ್ಷೆ ಅನುಭವಿಸಿ ಬಂದಿದ್ದ. ಬಂಧಿತರೆಲ್ಲರೂ ಕೊಲೆ, ಕೊಲೆಯತ್ನ, ಹಲ್ಲೆ, ಗಾಂಜಾ, ಅಕ್ರಮ ಮರಳು ಸಾಗಣೆ ಪ್ರಕರಣಗಳಲ್ಲಿ ಭಾಗಿಯಾದವರು. ಇವರು ಅಪರಾಧ ಚಟುವಟಿಕೆಗಳನ್ನು ಮಾಡಿರುವ ಸುಮಾರು 15-20 ಮಂದಿಯ ಗ್ಯಾಂಗ್ ಕಟ್ಟಿಕೊಂಡಿದ್ದಾರೆ ಎಂದರು.
ಆರೋಪಿಗಳು, ಇಬ್ಬರು ದ್ವಿಚಕ್ರ ವಾಹನ ಸವಾರರನ್ನು ದರೋಡೆ ಮಾಡಿದಾಗ ಪೊಲೀಸರಿಗೆ ದೂರು ನೀಡಿದರೆ ಜೈಲಿನಿಂದ ಹೊರಬಂದ ಬಳಿಕ ಪ್ರತೀಕಾರ ತೀರಿಸುವ ಬೆದರಿಕೆ ಹಾಕಿದ್ದರು. ಆರಂಭದಲ್ಲಿ ದೂರು ನೀಡಲು ದರೋಡೆಗೊಳಗಾದವರು ಹಿಂದೇಟು ಹಾಕಿದ್ದರು. ಆದರೆ, ಪೊಲೀಸರು ಧೈರ್ಯ ತುಂಬಿದ ಬಳಿಕ ದೂರು ದಾಖಲಿಸಿದ್ದಾರೆ. ಅದರಂತೆ ಆರೋಪಿಗಳನ್ನು ಪತ್ತೆ ಹಚ್ಚಿದಾಗ ಇವರಿಗೆ ಮುಂದೆ ಬೇರೆ ಬೇರೆ ಅಪರಾಧ ಚಟುವಟಿಕೆಗಳನ್ನು ನಡೆಸಲು ದ್ವಿಚಕ್ರ ವಾಹನಗಳು ಬೇಕಾಗಿದ್ದವು. ಅದಕ್ಕಾಗಿ ದ್ವಿಚಕ್ರ ವಾಹನಗಳನ್ನು ದರೋಡೆ ಮಾಡಿದ್ದರು ಎಂದು ತಿಳಿಸಿದರು.
ಓದಿ : ಬೈಕ್ ಸವಾರ ಸಾವು ಪ್ರಕರಣ : ಪೊಲೀಸರ ಮೇಲೆ ಹಲ್ಲೆ ಮಾಡಿದ 8 ಜನರ ಬಂಧನ
ಬಾಲಕಿಗೆ ಅಶ್ಲೀಲ ಸಂದೇಶ ಕಳುಹಿಸಿದ ಪ್ರಕರಣದಲ್ಲಿ ಬಂಧಿತನಾಗಿ ಬೆಂಗಳೂರು ಜೈಲಿನಲ್ಲಿರುವ ಆರೋಪಿವೋರ್ವ ಇವರಿಗೆ ನಾಯಕನಂತಿದ್ದ. ಇವರು ಯಾವ ಅಪರಾಧ ಚಟುವಟಿಕೆಗಳನ್ನು ಮಾಡಬೇಕು, ಸಿಕ್ಕಿಬಿದ್ದರೆ ಏನು ಮಾಡಬೇಕು ಮೊದಲಾದ ಮಾರ್ಗದರ್ಶನಗಳನ್ನು ಆತ ನೀಡುತ್ತಿದ್ದ. ಆತನನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗುವುದು ಎಂದು ಪೊಲೀಸ್ ಆಯುಕ್ತರು ಹೇಳಿದರು.
ಬಂಧಿತರ ತಂಡ ಪಾತಕಿ ರವಿ ಪೂಜಾರಿಯ ಓರ್ವ ಬೆಂಬಲಿಗನ ಹತ್ಯೆಗೆ ಸಂಚು ರೂಪಿಸಿತ್ತು. ಅದಕ್ಕಾಗಿ ಇಬ್ಬರನ್ನು ಗುರುತಿಸಿಕೊಂಡಿದ್ದರು. ಇಬ್ಬರಲ್ಲಿ ಯಾರಾದರು ಒಬ್ಬನನ್ನು ಹತ್ಯೆ ಮಾಡುವ ಯೋಜನೆ ಹಾಕಿದ್ದರು. ಅದಕ್ಕಾಗಿ ಎಲ್ಲಾ ಸಿದ್ಧತೆ ಮಾಡಿದ್ದರು. ಒಂದು ವೇಳೆ ಆರೋಪಿಗಳು ಪತ್ತೆಯಾಗದಿದ್ದರೆ ಇನ್ನು 10 ದಿನಗಳೊಳಗೆ ಇಬ್ಬರಲ್ಲಿ ಒಬ್ಬ ವ್ಯಕ್ತಿಯ ಹತ್ಯೆ ನಡೆಯುತ್ತಿತ್ತು. ರವಿ ಪೂಜಾರಿ ಗ್ಯಾಂಗ್ನ ಒಬ್ಬರನ್ನು ಹತ್ಯೆಗೈದು ಎದುರಾಳಿ ಗ್ಯಾಂಗ್ನೊಂದಿಗೆ ಸೇರಿಕೊಳ್ಳುವುದು ಇವರ ಯೋಜನೆಯಾಗಿತ್ತು. ರವಿ ಪೂಜಾರಿ ಗ್ಯಾಂಗ್ನವರನ್ನು ಕೊಂದರೆ ಎದುರಾಳಿ ಗುಂಪು ಗುರುತಿಸುತ್ತದೆ. ಅಪರಾಧ ಚಟುವಟಿಕೆಗಳಲ್ಲಿ ಮಂಗಳೂರಲ್ಲಿ ನಮ್ಮದೇ ಹವಾ ಸೃಷ್ಟಿಸಬಹುದೆಂಬುದು ಇವರ ಪ್ಲಾನ್ ಆಗಿತ್ತು ಎಂದು ವಿವರಿಸಿದರು.
ಈಗ ಬಂಧಿತರಾಗಿರುವ ನಾಲ್ವರು ರೌಡಿಶೀಟರ್ಗಳಾಗಿದ್ದಾರೆ. ಈ ಗ್ಯಾಂಗ್ನಲ್ಲಿರುವ ಇನ್ನೂ ಹಲವರನ್ನು ಶೀಘ್ರ ಬಂಧಿಸಲಾಗುವುದು ಎಂದರು. ಮಾಧ್ಯಮಗೋಷ್ಟಿಯಲ್ಲಿ ಡಿಸಿಪಿಗಳಾದ ಹರಿರಾಂ ಶಂಕರ್, ವಿನಾಯಕ್ ಗಾಂವ್ಕರ್, ಎಸಿಪಿ ರಂಜಿತ್ ಬಂಡಾರು ಉಪಸ್ಥಿತರಿದ್ದರು.