ಮಂಗಳೂರು (ದಕ್ಷಿಣ ಕನ್ನಡ): ಸಮುದ್ರದ ಆಳದಲ್ಲಿ ವಾಸಿಸುವ 'ಲಿಯೊಪೋರ್ಡ್ ಹನಿಕೋಂಬ್ ಈಲ್' ಎಂದು ಕರೆಯಲ್ಪಡುವ ಅಪರೂಪದ ಮೀನು ಸುರತ್ಕಲ್ ಸಮೀಪದ ಗುಡ್ಡೆಕೊಪ್ಪ ಸಮುದ್ರ ತೀರದಲ್ಲಿ ಪತ್ತೆಯಾಗಿದೆ. ಕನ್ನಡದಲ್ಲಿ ಇದನ್ನು 'ಅರೋಳಿ ಮೀನು' ಎಂದು ಕರೆಯುತ್ತಾರೆ. ಮೇಲ್ನೋಟಕ್ಕೆ ಅಕ್ವೇರಿಯಂನಲ್ಲಿ ಸಾಕುವ ಮೀನಿನಂತೆ ಕಂಡರೂ, ಇದು ಹಾವಿನಂತೆ ಉದ್ದಕ್ಕೆ ಬೆಳೆಯುತ್ತದೆ.
ಸೇವನೆಗೆ ಯೋಗ್ಯವಲ್ಲದ ಮೀನು: ಸಾಮಾನ್ಯವಾಗಿ ಕರಾವಳಿಯಲ್ಲಿ ಎಲ್ಲಾ ರೀತಿಯ ಮೀನುಗಳು ಸಿಗುತ್ತವೆ. ಕೆಲವೊಂದು ತಿನ್ನಲು ಯೋಗ್ಯವಾಗಿರುತ್ತವೆ. ಆದರೆ ಈ ಮೀನು ಸ್ವಲ್ಪ ಮಟ್ಟಿಗೆ ವಿಷಪೂರಿತವಾಗಿರುವುದರಿಂದ ಸ್ಥಳೀಯರು ಇದನ್ನು ತಿನ್ನುವುದಿಲ್ಲ. ಹೆಚ್ಚಾಗಿ ಕಲ್ಲು ಪ್ರದೇಶದ ಎಡೆಯಲ್ಲಿ ಇದ್ದುಕೊಂಡು ಸಣ್ಣ ಮೀನುಗಳನ್ನು ತಿನ್ನುತ್ತಾ ಇದು ಬದುಕುತ್ತದೆ. ಗುಡ್ಡಕೊಪ್ಪ ಬಳಿಯ ಸಮುದ್ರ ತೀರದಲ್ಲಿ ಸುಮಾರು ನಾಲ್ಕು ಅಡಿ ಈ ಉದ್ದದ ಮೀನು ಪತ್ತೆಯಾಗಿದ್ದು, ಸ್ಥಳೀಯರಾದ ಅನುಪಮ ಶಿವರಾಂ ಅವರು ಗಮನಿಸಿ ಮಾಹಿತಿ ನೀಡಿದ್ದಾರೆ.
ಕೆಲವು ದಿನಗಳ ಹಿಂದೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಭದ್ರಾ ಹಿನ್ನೀರಿನಲ್ಲಿ 56 ಕೆಜಿ ತೂಕದ ಕ್ಯಾಟ್ಲಾ ಮೀನು ಬಲೆಗೆ ಬಿದ್ದಿತ್ತು. ಆಕರ್ಷಕ ಮೀನನ್ನು ಎನ್.ಆರ್. ಪುರದ ಫೈರೋಜ್ ಎಂಬವರ ಅಂಗಡಿಗೆ ತರಲಾಗಿತ್ತು. ಇದನ್ನು ನಾಲ್ವರು ಗ್ರಾಹಕರು 12 ಸಾವಿರ ರೂಪಾಯಿಗೆ ಖರೀದಿಸಿದ್ದರು.
ಭಾರತೀಯ ಕಾರ್ಪ್ ಎಂದು ಕರೆಯಲ್ಪಡುವ ಕ್ಯಾಟ್ಲಾ ಮೀನು ದೇಶದ ನದಿಗಳು ಮತ್ತು ಸರೋವರಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ವರ್ಷವಿಡೀ ಲಭ್ಯವಿದ್ದು, ಮಾರುಕಟ್ಟೆಯಲ್ಲಿ ಕಂಡುಬರುವ ಜನಪ್ರಿಯ ಮೀನು ಪ್ರಭೇದಗಳ ಪೈಕಿ ಇದೂ ಒಂದು. ಈ ಮೀನು ಒಮೆಗಾ 6 ರಿಂದ ಒಮೆಗಾ 3 ಕೊಬ್ಬಿನ ಆಮ್ಲಗಳನ್ನು ಹೊಂದಿದೆ. ಕ್ಯಾಟ್ಲಾ ಮೀನಿನಲ್ಲಿ ನಿಯಾಸಿನ್ ಅಥವಾ ವಿಟಮಿನ್ ಬಿ3 ಕೂಡ ಹೇರಳವಾಗಿದೆ. ಕ್ಯಾಟ್ಲಾ ಫಿಶ್ ಮೂಲಕ ಬಗೆ ಬಗೆಯ ರೆಸಿಪಿಗಳನ್ನು ತಯಾರಿಸಬಹುದು. ಹೆಚ್ಚು ರುಚಿಕಟ್ಟಾಗಿರುವ ಕಾರಣಕ್ಕೆ ದೇಶವ್ಯಾಪಿ ಮೀನು ಖಾದ್ಯಪ್ರಿಯರಿಗೆ ಅಚ್ಚುಮೆಚ್ಚಾಗಿದೆ.
ಇದನ್ನೂ ಓದಿ: ದೇವಸ್ಥಾನದ ಆವರಣದಲ್ಲಿ ಚಪ್ಪಲಿ ಕಳವು: ಆನ್ಲೈನ್ನಲ್ಲಿ ಎಫ್‌ಐಆರ್ ದಾಖಲಿಸಿದ ವ್ಯಕ್ತಿ
ಮಹಿಳಾಮಣಿಯರಿಂದ ಕಾರ್ಪೋರೇಟರ್ಗೆ ಕ್ಲಾಸ್: ಮತ್ತೊಂದೆಡೆ ಮಂಗಳೂರು ನಗರದ ಉರ್ವಸ್ಟೋರ್ ಸುಂಕದಕಟ್ಟೆ ಪ್ರದೇಶದಲ್ಲಿ ಕುಡಿಯುವ ನೀರಿಲ್ಲವೆಂದು ಆ ಏರಿಯಾದ ಮಹಿಳೆಯರು ಜೊತೆಯಾಗಿ ಮಹಿಳಾ ಕಾರ್ಪೊರೇಟರ್ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಮಹಿಳೆಯರ ಪ್ರಶ್ನೆಗೆ ಉತ್ತರಿಸಲಾಗದೇ, ಕಾರ್ಪೊರೇಟರ್ ವಿಜಯಲಕ್ಷ್ಮಿ ಶೆಟ್ಟಿಯವರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಇದರ ವಿಡಿಯೋ ಇದೀಗ ವೈರಲ್ ಆಗಿದೆ.
ಸುಂಕದಕಟ್ಟೆ ಪ್ರದೇಶದ ಕೆಲವು ಮನೆಗಳಿಗೆ ನೀರಿನ ವಾಲ್ವ್ ಸಮಸ್ಯೆಯಿಂದ ಕಳೆದ 12 ದಿನಗಳಿಂದ ನೀರು ಬರುತ್ತಿಲ್ಲವೆಂದು ಸಾರ್ವಜನಿಕರು ಕಾರ್ಪೊರೇಟರ್ನಲ್ಲಿ ತಮ್ಮ ಅಳಲು ತೋಡಿಕೊಂಡಿದ್ದರು. ಈ ಬಗ್ಗೆ ಕ್ಷೇತ್ರದ ಶಾಸಕರು, ಮ.ನ.ಪಾ ಮೇಯರ್, ಮನಪಾ ಆಯುಕ್ತರಿಗೂ ಸಮಸ್ಯೆಯ ಬಗ್ಗೆ ತಿಳಿಸಲಾಗಿದೆ. ಇದರಿಂದ ಏನೂ ಪ್ರಯೋಜನವಾಗಿಲ್ಲ. ಆದ್ದರಿಂದ ಸ್ಥಳಕ್ಕೆ ಬಂದ ಕಾರ್ಪೊರೇಟರ್ ಅನ್ನು ಮಹಿಳೆಯರು ತರಾಟೆಗೆ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ: ಭದ್ರಾ ಹಿನ್ನೀರಲ್ಲಿ 56 ಕೆಜಿ ತೂಕದ ಕ್ಯಾಟ್ಲಾ ಮೀನು ಬಲೆಗೆ; 12 ಸಾವಿರ ರೂಪಾಯಿಗೆ ಸೇಲ್- ವಿಡಿಯೋ