ಮಂಗಳೂರು:12 ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿದ ಆರೋಪಿಯನ್ನು ಮಂಗಳೂರಿನ ಮಹಿಳಾ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಜುಲೈ 15 ರಂದು 12 ವರ್ಷ 10 ತಿಂಗಳು ಪ್ರಾಯದ ಬಾಲಕಿ ತನ್ನ ತಾಯಿಯೊಂದಿಗೆ ಮಂಗಳೂರು ಮಹಿಳಾ ಪೊಲೀಸ್ ಠಾಣೆಗೆ ಬಂದು ಈ ಬಗ್ಗೆ ದೂರು ನೀಡಿದ್ದಳು.
ಪೊಲೀಸ್ ಮೂಲಗಳು ಹೇಳುವುದೇನು?; ಬಾಲಕಿ 8 ನೇ ತರಗತಿಯಲ್ಲಿ ಓದುತ್ತಿದ್ದು, ಉಳ್ಳಾಲ ಪೇಟೆಯ ಮಹಮ್ಮದ್ ಶಾಫಿ ಯಾನೆ ಶಾಫಿ ಎಂಬುವನ ಪರಿಚಯವಿದ್ದು ದಾರಿಯಲ್ಲಿ ಸಿಕ್ಕಾಗ ಮಾತನಾಡುತ್ತಿದ್ದನು. ಇದೇ ವರ್ಷದ ಜನವರಿ ತಿಂಗಳಲ್ಲಿ ಅಪ್ರಾಪ್ತ ಬಾಲಕಿ ಮನೆಯಲ್ಲಿ ಒಬ್ಬಳೇ ಇದ್ದ ಸಮಯದಲ್ಲಿ ಆರೋಪಿ ಶಾಫಿ ಎಂಬಾತನು ಬಾಲಕಿಯ ಬಾಯಿಗೆ ಕೈ ಬಿಗಿಹಿಡಿದು ಪಕ್ಕದ ರೂಮಿಗೆ ಎಳೆದುಕೊಂಡು ಹೋಗಿ ಅವಳಿಗೆ ಅತ್ಯಾಚಾರ ಮಾಡಿದ್ದು ಅಲ್ಲದೇ ಇತರ ದಿನಗಳಲ್ಲಿ ಅವಳು ಒಬ್ಬಳೇ ಇದ್ದಾಗ ಆತನು ಮನೆಗೆ ಹೋಗಿ ಅತ್ಯಾಚಾರ ಮಾಡಿದ್ದನು. ಇದರಿಂದ ಆಕೆಯು 6 ತಿಂಗಳ ಗರ್ಭಿಣಿಯಾಗಿದ್ದಾಳೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಅಪ್ರಾಪ್ತ ಬಾಲಕಿ ದೂರು ನೀಡಿದ್ದು, ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ಕೇಸು ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಇಂದು ಬಂಧಿಸಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯವು 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ. ಈ ಪ್ರಕರಣದ ತನಿಖೆಯನ್ನು ಮಂಗಳೂರು ಮಹಿಳಾ ಪೊಲೀಸ್ ಠಾಣೆ ಪೊಲೀಸ್ ನಿರೀಕ್ಷಕ ಲೋಕೇಶ್ ಎ.ಸಿ ನಡೆಸುತ್ತಿದ್ದಾರೆ.
ಮಂಗಳೂರು: ರೈಲು ಡಿಕ್ಕಿ ವ್ಯಕ್ತಿ ಸಾವು:- ರೈಲು ಡಿಕ್ಕಿ ಹೊಡೆದ ಪರಿಣಾಮ ಅಪರಿಚಿತ ವ್ಯಕ್ತಿಯೊಬ್ಬನು ಮೃತಪಟ್ಟಿರುವ ಘಟನೆ ನಗರದ ಪಚ್ಚನಾಡಿ ರೈಲ್ವೆ ಬ್ರಿಡ್ಜ್ ಬಳಿ ನಡೆದಿದೆ. ಪಚ್ಚನಾಡಿ - ವಾಮಂಜೂರು ಸಂಪರ್ಕದ ರೈಲ್ವೆ ಮೇಲ್ಸೆತುವೆಯ ಬಳಿ ಮತ್ಯ್ಸಗಂಧ ರೈಲು ವ್ಯಕ್ತಿಗೆ ಇಂದು ಬೆಳಗ್ಗೆ 11.30 ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿ ಸ್ಥಳದಲ್ಲೇ ಮೃತನಾಗಿದ್ದು, ಮೃತಪಟ್ಟ ವ್ಯಕ್ತಿಗೆ ಸುಮಾರು 52 ವರ್ಷ ಪ್ರಾಯ ಇರಬಹುದೆಂದು ಪೊಲೀಸರು ಅಂದಾಜಿಸಿದ್ದಾರೆ. ಆದರೆ, ರೈಲು ಡಿಕ್ಕಿಯಾಗಿ ವ್ಯಕ್ತಿಯ ಮುಖ ಜಜ್ಜಿ ಹೋಗಿರುವುದರಿಂದ ಆತನ ಗುರುತು ಪತ್ತೆಯಾಗಿಲ್ಲ. ಸ್ಥಳಕ್ಕೆ ಆರ್ ಪಿ ಎಫ್, ಜಿ ಆರ್ ಪಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಆಸ್ಪತ್ರೆಗೆ ರವಾನಿಸಲಾಗಿದೆ.
ಮಾದಕ ವಸ್ತು ಎಂಡಿಎಂಎ ಮಾರುತ್ತಿದ್ದ ಆರೋಪಿ ಬಂಧನ:- ಮಾದಕ ವಸ್ತು (Methylene dioxy methamphetamine) MDMA ನ್ನು ಕಾರಿನಲ್ಲಿಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದವನನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಉಳ್ಳಾಲ ತಾಲೂಕಿನ ನಲಿಕೆದ ಗುಡ್ಡೆ ಮನೆಯ ಮಹಮ್ಮದ್ ಆರೀಫ್ ಯಾನೆ ಆರೀಫ್(28) ಬಂಧಿತ ಆರೋಪಿ. ಮಂಗಳೂರು ನಗರದಲ್ಲಿ ಮಾದಕ ವಸ್ತುವಾದ ಎಂಡಿಎಂಎನ್ನು ಕಾರಿನಲ್ಲಿಟ್ಟುಕೊಂಡು ಮುಡಿಪು ಕಂಬಳ ಪದವು ಕೆಐಡಿಬಿ ರಸ್ತೆ ಪರಿಸರದಲ್ಲಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ನಿಷೇದಿತ ಮಾದಕ ವಸ್ತು ಎಂಡಿಎಂ ಮಾರುತ್ತಿದ್ದ ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು ಆತನಿಂದ 25 ಗ್ರಾಂ ತೂಕದ ರೂ. 1,25,000 ಮೌಲ್ಯದ ಎಂಡಿಎಂಎ ಮಾದಕ ವಸ್ತು, ಮಾರುತಿ ಅಲ್ಟೋ 800 ಕಾರು, 1 ಮೊಬೈಲ್ , ಡಿಜಿಟಲ್ ತೂಕ ಮಾಪನವನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ ರೂ 6,35,500/-ಆಗಬಹುದು ಎಂದು ಅಂದಾಜಿಸಲಾಗಿದೆ.
ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಈ ಮಾದಕ ವಸ್ತು ಮಾರಾಟ ಜಾಲದಲ್ಲಿ ಇನ್ನೂ ಹಲವಾರು ಆರೋಪಿಗಳು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ಪತ್ತೆ ಕಾರ್ಯ ಮುಂದುವರಿಸಿದ್ದಾರೆ. ಆರೋಪಿ ವಿರುದ್ಧ ಈ ಹಿಂದೆ ಕೊಣಾಜೆ ಠಾಣೆಯಲ್ಲಿ ಜಾನುವಾರು ಕಳ್ಳತನ ಪ್ರಕರಣ ದಾಖಲಾಗಿದೆ. ಕಾರ್ಯಾಚರಣೆಯಲ್ಲಿ ಸಿಸಿಬಿ ಘಟಕದ ಪೊಲೀಸ್ ನಿರೀಕ್ಷಕ ಶ್ಯಾಮ್ ಸುಂದರ್ ಹೆಚ್ ಎಂ, ಪಿಎಸ್ಐ ಯವರಾದ ರಾಜೇಂದ್ರ ಬಿ, ಸುದೀಪ್ ಎಂ ವಿ, ಶರಣಪ್ಪ ಭಂಡಾರಿ, ನರೇಂದ್ರ ಹಾಗೂ ಸಿಸಿಬಿ ಸಿಬ್ಬಂದಿ ಪಾಲ್ಗೊಂಡಿದ್ದರು.
ಇದನ್ನೂಓದಿ: ಬಾಲಕಿಯ ಮೇಲೆ ಕಾಮುಕರ ಅಟ್ಟಹಾಸ: ದೆಹಲಿಯ ನಿರ್ಭಯಾ ಪ್ರಕರಣ ನೆನಪಿಸುವಂತಿದೆ ಈ ಗ್ಯಾಂಗ್ ರೇಪ್