ಮಂಗಳೂರು: ಮಂಗಳೂರಿನ ಕದ್ರಿಯಲ್ಲಿ ಮಲಬದ್ದತೆಯ ಸಮಸ್ಯೆಯಿಂದ ಸಂಕಷ್ಟದಲ್ಲಿದ್ದ ಹೆಬ್ಬಾವನ್ನು ಮಂಗಳೂರಿನ ವೈದ್ಯರ ತಂಡ ಚಿಕಿತ್ಸೆ ನೀಡಿ ರಕ್ಷಿಸಿದೆ. ಮಂಗಳೂರಿನ ವೈದ್ಯಾಧಿಕಾರಿಗಳಾದ ಡಾ.ಮೇಘನಾ ಪೆಮ್ಮಯ್ಯ, ಡಾ.ಯಶಸ್ವಿ ನಾರಾವಿ, ಡಾ.ಕೀರ್ತನಾ ಜೋಷಿ, ನಫೀಸಾ ಕೌಸರ್, ಸಮೀಕ್ಷಾ ರೆಡ್ಡಿ ವೈದ್ಯರ ತಂಡ ಈ ಹೆಬ್ಬಾವಿನ ಶಸ್ತ್ರ ಚಿಕಿತ್ಸೆ ನಡೆಸಿ ರಕ್ಷಣೆ ಮಾಡಿದ್ದಾರೆ.
ಈಟಿವಿ ಭಾರತ ಜೊತೆಗೆ ಮಾತನಾಡಿದ ಚಿಕಿತ್ಸೆ ನೀಡಿದ ತಂಡದ ವೈದ್ಯ ಡಾ.ಯಶಸ್ವಿ ನಾರಾವಿ,
ಉರಗ ರಕ್ಷಕ ಧೀರಜ್ ಗಾಣಿಗ ಅವರಿಗೆ ಕದ್ರಿಯಲ್ಲಿ ಅಸ್ವಸ್ಥ ಹೆಬ್ಬಾವು ಕಾಣಸಿಕ್ಕಿದೆ. ಅವರು ನನಗೆ ಕರೆ ಮಾಡಿ ಹೆಬ್ಬಾವಿಗೆ ಯಾರೋ ಹೊಡೆದಿರಬೇಕು ಎಂದರು. ಅದಕ್ಕೆ ಚಿಕಿತ್ಸೆ ನೀಡಲು ಕ್ಲಿನಿಕ್‌ಗೆ ಕರೆ ತರಲು ತಿಳಿಸಿದ್ದೆ. ಅದನ್ನು ಪರಿಶೀಲಿಸಿದಾಗ ಅದಕ್ಕೆ ಯಾರೂ ಹೊಡೆದಿರಲಿಲ್ಲ. ಅದಕ್ಕೆ ಮಲಬದ್ದತೆ ಸಮಸ್ಯೆ ಇತ್ತು ಎಂಬುದು ತಿಳಿದುಬಂದಿದೆ ಎಂದರು.
ತಪಾಸಣೆ ನಡೆಸಿದಾಗ ಹಾವು ಮಲಬದ್ಧತೆಯಿಂದ ಬಳಲುತ್ತಿರುವುದು ಕಂಡುಬಂದಿದೆ. ಇದು ಸಾಕಷ್ಟು ಗಟ್ಟಿಯಾದ ಮಲಬದ್ಧತೆಯ ದ್ರವ್ಯರಾಶಿಯನ್ನು ಹೊಂದಿತ್ತು. ಹೆಬ್ಬಾವಿನ ದೇಹದ ಅರ್ಧ ಭಾಗದಷ್ಟು ಮಲ ತುಂಬಿಕೊಂಡಿತ್ತು. 13 ಕೆಜಿ ತೂಕದ ಹೆಬ್ಬಾವಿಗೆ ಅಲ್ಟ್ರಾಸೌಂಡ್ ಮಾಡುವ ಮೊದಲು ಅರವಳಿಕೆ ನೀಡಲಾಯಿತು. ನಂತರ ಶಸ್ತ್ರಚಿಕಿತ್ಸೆ ಮಾಡಲಾಯಿತು. ಮೂರು ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ನಡೆಯಿತು.
ಎಲ್ಲಾ ಮಲಬದ್ಧತೆ ವಸ್ತುಗಳನ್ನು ತೆಗೆದುಹಾಕಲಾಗಿದೆ. ನಂತರ, ಐದು ದಿನಗಳವರೆಗೆ ದ್ರವಗಳು, ಆ್ಯಂಟಿಬಯೋಟಿಕ್ ಮತ್ತು ನೋವು ಔಷಧಿಗಳನ್ನು ನೀಡಲಾಯಿತು. ಹೆಬ್ಬಾವುಗಳಲ್ಲಿ ಮಲಬದ್ಧತೆ ಸಾಮಾನ್ಯವಾಗಿದೆ. ಆದರೆ ಇಷ್ಟೊಂದು ಸಮಸ್ಯೆಯನ್ನು 10 ವರ್ಷಗಳ ಅಭ್ಯಾಸದಲ್ಲಿ ನೋಡಿಲ್ಲ ಎಂದು ಹೇಳಿದರು. ಚೇತರಿಸಿಕೊಂಡ ನಂತರ, ಹೆಬ್ಬಾವನ್ನು ರಕ್ಷಿಸಿದ ಪ್ರದೇಶಕ್ಕೆ ಹತ್ತಿರ ಬಿಡಲಾಯಿತು.
ಮನೆಯಲ್ಲಿ ಅಪರೂಪದ 'ಫಾರ್ಸ್ಟೆನ್ ಕ್ಯಾಟ್ ಸ್ನೇಕ್' ಪತ್ತೆ: ಹಲವು ಪ್ರಕಾರ, ಆಕಾರಗಳ ಹಾವುಗಳಿದ್ದರೂ, ಅವುಗಳಲ್ಲಿ ಕೆಲವು ಮಾತ್ರ ಜನರ ಗಮನ ಸೆಳೆಯುತ್ತವೆ. ಆದರೆ ಇಂಥ ಅನೇಕ ಪ್ರಬೇಧಗಳ ಹಾವುಗಳು ಜನರ ಗಮನಕ್ಕೂ ಬಾರದೇ ದಟ್ಟ ಅರಣ್ಯಗಳ ಮಧ್ಯೆ ತಮ್ಮ ಪಾಡಿಗೆ ಬದುಕುತ್ತಿವೆ. ಇಂಥದೇ ದಟ್ಟಾರಣ್ಯಗಳ ಮಧ್ಯೆ ಸ್ವಚ್ಛಂದವಾಗಿ ವಿಹರಿಸುವ ಅಪರೂಪದ ಹಾವೊಂದು ಪುತ್ತೂರಿನ ಬಲ್ನಾಡು ನಿವಾಸಿ ರವಿಕೃಷ್ಣ ಕಲ್ಲಜೆ ಎಂಬವರ ಮನೆಯ ಟೇಬಲ್ ಮೇಲೆ ಹರಿದಾಡುತ್ತಿತ್ತು. ಪುತ್ತೂರಿನ ಯುವ ಉರಗತಜ್ಞ ತೇಜಸ್ ಬನ್ನೂರು ಅವರು ಆ ಹಾವನ್ನು ರಕ್ಷಿಸಿ ಮತ್ತೆ ಅದರ ವಾಸಸ್ಥಾನ ದಟ್ಟ ಅರಣ್ಯಕ್ಕೆ (ಸೆಪ್ಟೆಂಬರ್ -21-2023) ಬಿಟ್ಟಿದ್ದರು.
ಫಾರ್ಸ್ಟೆನ್ ಕ್ಯಾಟ್ ಸ್ನೇಕ್ (ಬೆಕ್ಕು ಕಣ್ಣಿನ ಹಾವು) ಎಂದು ಕರೆಯಲಾಗುವ ಈ ಹಾವನ್ನು ನೋಡಿದ ಉರಗತಜ್ಞ ತೇಜಸ್ ಅವರು, ಪುತ್ತೂರಿನಲ್ಲಿ ಈ ರೀತಿಯ ಹಾವು ಪತ್ತೆಯಾಗಿರುವುದೇ ಅಪರೂಪ ಎಂದಿದ್ದರು. ಕಿರಿಯ ವಯಸ್ಸಿನಲ್ಲೇ ಹಾವು ಹಿಡಿದು ಅವುಗಳ ರಕ್ಷಣೆ ಮಾಡುತ್ತಿರುವ ತೇಜಸ್ ಕಳೆದ ಹಲವು ವರ್ಷಗಳಿಂದ ಹಲವು ರೀತಿಯ, ಹಲವು ಪ್ರಕಾರದ ಹಾವುಗಳನ್ನು ರಕ್ಷಣೆ ಮಾಡಿದ್ದು, ಸುಮಾರು ಹತ್ತು ಸಾವಿರಕ್ಕೂ ಮಿಕ್ಕಿದ ಹಾವುಗಳನ್ನು ರಕ್ಷಿಸಿದ್ದಾರೆ. ಹೆಚ್ಚಾಗಿ ಪಶ್ಚಿಮ ಘಟ್ಟದಂತಹ ದಟ್ಟ ಅರಣ್ಯಗಳ ಮಧ್ಯೆಯೂ ಅಪರೂಪವಾಗಿ ಕಾಣಸಿಗುತ್ತವೆ ಈ ಬೆಕ್ಕು ಕಣ್ಣಿನ ಹಾವು.
ಇದನ್ನೂ ಓದಿ: ಪುತ್ತೂರು: ಮನೆಯಲ್ಲಿ ಅಪರೂಪದ 'ಫಾರ್ಸ್ಟೆನ್ ಕ್ಯಾಟ್ ಸ್ನೇಕ್' ಪತ್ತೆ