ಕಡಬ: ಅನಾರೋಗ್ಯದ ಹಿನ್ನೆಲೆಯಲ್ಲಿ ಪುತ್ತೂರು ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದು ತಿರುಗಿ ಬರಲು ವಿಧಿಯಿಲ್ಲದೇ ಕಂಗಾಲಾದ ಕೋಡಿಂಬಾಳದ ವ್ಯಕ್ತಿಯನ್ನು ತಮ್ಮ ಕರ್ತವ್ಯದ ನಡುವೆಯೂ ಪುತ್ತೂರು ಮತ್ತು ಕಡಬ ಪೊಲೀಸರು ಮನೆಯವರೆಗೆ ತಲುಪಿಸಿ ಮಾನವೀಯತೆ ಮೆರೆದಿದ್ದಾರೆ.
ಕಡಬ ತಾಲೂಕಿನ ಕೋಡಿಂಬಾಳ ಗ್ರಾಮದ ಪಟ್ನ ದೊಡ್ಡ ಕೊಪ್ಪದ ನೋಣಯ್ಯ ಕುಂಬಾರ ಎಂಬವರು ಸೌದೆ ತರುವ ವೇಳೆ ಬಿದ್ದು ಸೊಂಟಕ್ಕೆ ಬಲವಾದ ಪೆಟ್ಟಾಗಿತ್ತು. ತುರ್ತು ಚಿಕಿತ್ಸೆಗಾಗಿ ಭಾನುವಾರ ಬೆಳಗ್ಗೆ ಕಡಬದಿಂದ ಪುತ್ತೂರಿಗೆ ಆ್ಯಂಬುಲೆನ್ಸ್ ಮೂಲಕ ಹೋಗಿದ್ದರು. ಆದರೆ ಪುತ್ತೂರಲ್ಲಿ ಚಿಕಿತ್ಸೆ ಪಡೆದು ನಂತರ ಲಾಕ್ಡೌನ್ ಹಿನ್ನೆಲೆಯಲ್ಲಿ ಕಡಬದ ಮನೆಗೆ ಮರಳಿ ಬರಲು ಯಾವುದೇ ವಾಹನದ ವ್ಯವಸ್ಥೆ ಇಲ್ಲದೇ ಪುತ್ತೂರಲ್ಲೇ ಕಂಗಾಲಾಗಿ ನಿಂತಿದ್ದರು.
ಈ ವೇಳೆ ಚಿಕಿತ್ಸೆಗೆ ಹೋಗಿದ್ದ ವ್ಯಕ್ತಿಯ ಜೊತೆ ಸಹಾಯಕ್ಕಾಗಿ ತೆರಳಿದ್ದ ಯಶವಂತ್ ಎಂಬವರು ಪುತ್ತೂರು ಪೊಲೀಸರಿಗೆ ತಮಗಾದ ಪರಿಸ್ಥಿತಿಯನ್ನು ವಿವರಿಸಿದರು. ಕೂಡಲೇ ಪೊಲೀಸರು ಸಹಾಯಕ್ಕೆ ಮುಂದಾಗಿದ್ದು, ರೋಗಿ ಮತ್ತು ಸಹಾಯಕನಿಗೆ ಎಳನೀರು, ಮಜ್ಜಿಗೆ ನೀಡಿ ಉಪಚರಿಸಿ ನಂತರ ಕಡಬ ಪೊಲೀಸರಿಗೂ ಮಾಹಿತಿ ನೀಡಿದರು. ತಕ್ಷಣ ಕಡಬ ಠಾಣಾ ಎಸ್ಐ ರುಕ್ಮ ನಾಯ್ಕ್ ತನ್ನ ಸಿಬ್ಬಂದಿಗೆ ಇವರನ್ನು ಕರೆದುಕೊಂಡು ಬರುವಂತೆ ತಿಳಿಸಿದ್ದರು.
ಇದೇ ವೇಳೆ ಪುತ್ತೂರಿನ ಪೊಲೀಸರು ತಮ್ಮ ಇಲಾಖಾ ವಾಹನದಲ್ಲಿ ಆಲಂಕಾರು ಪೇಟೆವರೆಗೆ ತಲುಪಿಸಿದರು. ಕಡಬ ಠಾಣಾ ಎಎಸ್ಐ ರವಿ ಮತ್ತು ಸಿಬ್ಬಂದಿ ಆಲಂಕಾರು ಪೇಟೆಯಿಂದ ಕಡಬದ ಪಟ್ಟಣದಲ್ಲಿರುವ ನೋಣಯ್ಯ ಅವರ ಮನೆಗೆ ಪೋಲಿಸ್ ವಾಹನದಲ್ಲಿ ಸುರಕ್ಷಿತವಾಗಿ ತಲುಪಿಸಿದ್ದಾರೆ.
ಇನ್ನು ಪೊಲೀಸರ ಈ ಕಾರ್ಯಕ್ಕೆ ರೋಗಿಯ ಕಡೆಯವರು ಮತ್ತು ಸಾರ್ವಜನಿಕರು ಮೆಚ್ಚುಗೆ ಸೂಚಿಸಿದ್ದಾರೆ.