ದಕ್ಷಿಣಕನ್ನಡ: ನಗರಸಭೆಯ ಈ ಸಾಲಿನ ತೆರಿಗೆ ಪ್ರಮಾಣದಲ್ಲಿ ಶೇ. 8ರಷ್ಟು ಇಳಿಕೆ ಮಾಡಬೇಕೆಂಬ ಮನವಿಯನ್ನು ಸಾಕಾರಗೊಳಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭರವಸೆ ನೀಡಿದ್ದಾರೆ ಎಂದು ಪುತ್ತೂರು ಅಸೋಸಿಯೇಶನ್ ಆಫ್ ಸಿವಿಲ್ ಇಂಜಿನಿಯರ್ಸ್ ಅಧ್ಯಕ್ಷ ಕೆ.ಹರೀಶ್ ಪುತ್ತೂರಾಯ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರಿನಲ್ಲಿ ಸೋಮವಾರ ನಗರಸಭೆ, ಪಟ್ಟಣ ಪಂಚಾಯಿತಿ, ಮಹಾನಗರಪಾಲಿಕೆಗಳ ಕುರಿತಂತೆ ಶಾಸಕರು ಮತ್ತು ಜಿಲ್ಲಾಧಿಕಾರಿಗಳ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಸಚಿವರು ಈ ಭರವಸೆಯನ್ನ ನೀಡಿದ್ದಾರೆ ಎಂದರು.
ಪುತ್ತೂರು ನಗರಸಭೆಯಲ್ಲಿ ಮಾತ್ರ ಜಾರಿಯಲ್ಲಿರುವ ಖಾತಾ ಪ್ರತಿ ನೀಡುವ ಸಂದರ್ಭದಲ್ಲಿ ಅಭಿವೃದ್ಧಿ ಶುಲ್ಕವನ್ನು ಸಂಗ್ರಹಿಸುವ ನಿಯಮವನ್ನು ಕೈಬಿಟ್ಟು, ಖಾತಾ ಪ್ರತಿ ನೀಡಲು ಶುಲ್ಕ ರದ್ದು ಮಾಡಲಾಗುವುದು ಎಂದು ಸಚಿವರು ಹೇಳಿದ್ದಾರೆ ಎಂದು ತಿಳಿಸಿದರು.
ಪುತ್ತೂರು ನಗರಸಭೆಯಲ್ಲಿ 2020-21ನೇ ಸಾಲಿನ ತೆರಿಗೆಯನ್ನ ಶೇ. 23ರಷ್ಟು ಹೆಚ್ಚಳಗೊಳಿಸಿ ಆಡಳಿತಾಧಿಕಾರಿಯವರು ಆದೇಶ ಮಾಡಿದ್ದರು. ತೆರಿಗೆ ಪ್ರಮಾಣವನ್ನು ಕಡಿಮೆ ಮಾಡಬೇಕೆಂಬ ಕೂಗು ಕೇಳಿಬಂದಿತ್ತು.