ಮಂಗಳೂರು: 1545ರ ಸುಮಾರಿಗೆ ದೇಶಕ್ಕೆ ಪೋರ್ಚುಗೀಸರು ದಾಳಿ ಇಟ್ಟಾಗ ಅವರನ್ನು ಧೈರ್ಯದಿಂದ ಹಿಮ್ಮೆಟ್ಟಿಸಿದ ವೀರರಾಣಿ ಅಬ್ಬಕ್ಕಳ ಹೆಸರು ಮಂಗಳೂರು ವಿಮಾನ ನಿಲ್ದಾಣಕ್ಕೆ ಹೆಚ್ಚು ಸೂಕ್ತ ಹಾಗೂ ಸಮಂಜಸ ಎಂದು ಉಳ್ಳಾಲದ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯ ಸ್ವಾಗತಾಧ್ಯಕ್ಷ ಕೆ. ಜಯರಾಮ ಶೆಟ್ಟಿ ಹೇಳಿದ್ದಾರೆ.
ನಗರದ ಪ್ರೆಸ್ ಕ್ಲಬ್ನಲ್ಲಿ ಮಾತನಾಡಿದ ಅವರು, ಪ್ರಥಮವಾಗಿ ಪರಕೀಯರನ್ನು ಎದರುರಿಸಿದ ಅಬ್ಬಕ್ಕಳಿಗೆ ಅಷ್ಟೊಂದು ಪ್ರಾಶಸ್ತ್ಯ ದೊರಕದಿರೋದು ಖೇದಕರ ಸಂಗತಿ. ಆದ್ದರಿಂದ ಜಾತ್ಯಾತೀತವಾಗಿ, ಧರ್ಮಾತೀತವಾಗಿ ನೋಡುವುದಾದಲ್ಲಿ ಅಬ್ಬಕ್ಕಳ ಹೆಸರನ್ನೇ ವಿಮಾನ ನಿಲ್ದಾಣಕ್ಕೆ ಇಡಬೇಕೆಂದು ನಾವು ಒತ್ತಾಯ ಮಾಡುತ್ತೇವೆ.1997 ರಿಂದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಪ್ರೋತ್ಸಾಹದಿಂದ ಉಳ್ಳಾಲದ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಆರಂಭಗೊಂಡಿದ್ದು, ಅಲ್ಲಿಂದ ಇಲ್ಲಿಯವರೆಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅಬ್ಬಕ್ಕಳ ಹೆಸರಿಡುವಂತೆ ಒತ್ತಾಯಿಸುತ್ತಾ ಬರಲಾಗಿದೆ.
ಇದಕ್ಕಾಗಿ ಪ್ರಧಾನ ಮಂತ್ರಿ, ಮುಖ್ಯಮಂತ್ರಿ, ಜಿಲ್ಲಾಧಿಕಾರಿಗೆಲ್ಲಾ ಮನವಿಯನ್ನು ನೀಡಲಾಗಿತ್ತು. ಆದರೆ ಇತ್ತೀಚೆಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬೇರೆ ಬೇರೆ ಹೆಸರನ್ನು ಸೂಚಿಸಲಾಗುತ್ತಿದೆ. ಈ ಬಗ್ಗೆ ನಾವೇನು ಟೀಕೆ ಮಾಡುತ್ತಿಲ್ಲ. ಆದರೆ ಎಲ್ಲಾ ರೀತಿಯಲ್ಲಿ ನೋಡಿದಾಗ ಅಬ್ಬಕ್ಕಳ ಹೆಸರು ವಿಮಾನ ನಿಲ್ದಾಣಕ್ಕೆ ಸೂಕ್ತ ಎಂದು ಕೆ.ಜಯರಾಮ ಶೆಟ್ಟಿ ಹೇಳಿದರು.