ಮಂಗಳೂರು: ನಗರದ ಪಂಪ್ವೆಲ್ ಮೇಲ್ಸೇತುವೆಯನ್ನು ಸಂಸದ ನಳಿನ್ ಕುಮಾರ್ ಮೊನ್ನೆ ತಾನೆ ಲೋಕಾರ್ಪಣೆಗೊಳಿಸಿದ್ದಾರೆ. ಆದರೆ ಪಂಪ್ವೆಲ್ ಮೇಲ್ಸೇತುವೆಯ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಕೇವಲ 50% ಕಾಮಗಾರಿ ಮಾತ್ರ ನಡೆದಿದೆ. ರಸ್ತೆಯಲ್ಲಿ ನಡೆದುಕೊಂಡು ಹೋಗುವವರಿಗೆ ಸುರಕ್ಷತೆ ಇಲ್ಲ. ಒಂದು ಮಳೆ ಬಂದರೆ ಕೊಚ್ಚಿಕೊಂಡು ಹೋಗುವ ಸಾಧ್ಯತೆ ಇದೆ ಎಂದು ವಿಧಾನಪರಿಷತ್ ಶಾಸಕ ಐವನ್ ಡಿಸೋಜ ಹೇಳಿದರು.
ನಗರದ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಅಂಡರ್ ಪಾಸ್ ರಸ್ತೆ ಸರಿಯಾಗಿಲ್ಲ. ಸರ್ವಿಸ್ ರಸ್ತೆ ಕಾಮಗಾರಿ ನಡೆದಿಲ್ಲ. ನೀರು ಹೋಗಲು ವ್ಯವಸ್ಥೆ ಆಗಿಲ್ಲ. ಹಾಗಾಗಿ ಮತ್ತೊಮ್ಮೆ ದ.ಕ. ಜಿಲ್ಲಾ ಕಾಂಗ್ರೆಸ್ ಸತ್ಯಶೋಧನಾ ಸಮಿತಿಯಿಂದ ಮತ್ತೊಮ್ಮೆ ಪಂಪ್ ವೆಲ್ ಮೇಲ್ಸೇತುವೆಗೆ ಭೇಟಿ ನೀಡಲಿದ್ದೇವೆ ಎಂದರು.
ಸಂಸದ ನಳಿನ್ ಕುಮಾರ್ ಕಟೀಲು ಅವರು ಪಂಪ್ ವೆಲ್ ಮೇಲ್ಸೇತುವೆ ಕಾಮಗಾರಿಯನ್ನು ಸಂಪೂರ್ಣಗೊಳಿಸದೆ ತನ್ನ ಸಾಧನೆ ಎಂದು ಬಿಂಬಿಸಿ ಉದ್ಘಾಟನೆ ಮಾಡಿದ್ದಾರೆ. ಆದ್ದರಿಂದ ಸಂಸದರನ್ನೂ ನಾನು ಆಹ್ವಾನ ಮಾಡುತ್ತೇನೆ. ಪಂಪ್ ವೆಲ್ ಮೇಲ್ಸೇತುವೆ ಉದ್ಘಾಟನೆ ಮಾಡುವಾಗ ಅವರು ನಮ್ಮನ್ನು ಕರೆಯಬೇಕಿತ್ತು. ಅವರು ಎಲ್ಲರ ಎಂಪಿ, ಆದರೆ ಅವರು ನಮ್ಮನ್ನು ಕರೆದಿಲ್ಲ ಎಂದರು.
ಪಂಪ್ ವೆಲ್ ಕಾಮಗಾರಿಯ ಉದ್ಘಾಟನೆ ಸರ್ಕಾರಿ ಕಾರ್ಯಕ್ರಮವಾಗಿದ್ದರೆ ನಾವೆಲ್ಲಾ ಬರುತ್ತಿದ್ದೆವು. ಆದರೆ ಅದು ಬಿಜೆಪಿ ಕಾರ್ಯಕ್ರಮವಾಗಿದೆ. ಆದ್ದರಿಂದ ನಾವ್ಯಾರು ಬಂದಿಲ್ಲ.13 ವರ್ಷಗಳ ಬಳಿಕ ಪಂಪ್ ವೆಲ್ ಮೇಲ್ಸೇತುವೆಯ ಟೇಪ್ ಕಟ್ ಮಾಡಿ, ಕಾಮಗಾರಿ ವಿಳಂಬಕ್ಕೆ ಕಾಂಗ್ರೆಸ್ ಕಾರಣ ಎನ್ನುತ್ತಿದ್ದಾರೆ. ಅಷ್ಟರವರೆಗೆ ಇವರೇನು ಕಡ್ಲೆಕಾಯಿ ತಿನ್ನುತ್ತಿದ್ದರಾ?. ಸಂಸತ್ತಿಗೆ ಹೋಗುತ್ತಿಲ್ಲ ಇವರು, ಮತ್ತೆ ಹೇಗೆ ನಮ್ಮ ಜಿಲ್ಲೆಯ ಪ್ರಗತಿಯಾಗುತ್ತದೆ ಎಂದು ಐವನ್ ಡಿಸೋಜ ಅವರು ನಳಿನ್ ಕುಮಾರ್ಗೆ ತಿರುಗೇಟು ನೀಡಿದರು.