ಬೆಳ್ತಂಗಡಿ: ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ತಹಶೀಲ್ದಾರ್ ಬಿ.ಕೆ. ಚಂದ್ರಮೌಳೇಶ್ವರ್ ಹತ್ಯೆಯನ್ನು ಖಂಡಿಸಿ, ಸರ್ಕಾರಿ ಅಧಿಕಾರಿಗಳು ಹಾಗೂ ನೌಕರರಿಗೆ ಕರ್ತವ್ಯದ ವೇಳೆ ಅಗತ್ಯ ರಕ್ಷಣೆ ನೀಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಬೆಳ್ತಂಗಡಿ ತಾಲೂಕು ಶಾಖೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಗೂ ಮುನ್ನಾ ಹತ್ಯೆಯಾದ ತಹಶೀಲ್ದಾರ್ ಚಂದ್ರಮೌಳೇಶ್ವರ್ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷಗಳ ಕಾಲ ಮೌನ ಆಚರಣೆ ಸಲ್ಲಿಸಲಾಯಿತು. ನಂತರ ಬೆಳ್ತಂಗಡಿ ತಹಶೀಲ್ದಾರ್ ಮೂಲಕ ಸರ್ಕಾರದ ಮುಖ್ಯಕಾರ್ಯದರ್ಶಿಗಳಿಗೆ ಮನವಿ ನೀಡಲಾಯಿತು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಬೆಳ್ತಂಗಡಿ ತಾಲೂಕು ಶಾಖೆಯ ಅಧ್ಯಕ್ಷ ಡಾ. ಜಯಕೀರ್ತಿ ಜೈನ್‌ರವರ ನೇತೃತ್ವದಲ್ಲಿ ನಡೆದ ಈ ಸಾಂಕೇತಿಕ ಪ್ರತಿಭಟನೆಯಲ್ಲಿ ರಾಜ್ಯ ಪರಿಷತ್ ಸದಸ್ಯರಾದ ಆನಂದ, ಉಪಾಧ್ಯಕ್ಷರಾದ ಜಯರಾಜ್, ಸಿದ್ದೇಶ್, ಪರಮೇಶ್ .ಟಿ ಹಾಗೂ ಕಂದಾಯ ಮತ್ತು ಇತರ ಇಲಾಖೆಯ ಸಿಬ್ಬಂದಿ ಭಾಗವಹಿಸಿದ್ದರು.