ಮಂಗಳೂರು: ನಗರದ ಎನ್ಐಟಿಕೆ ಟೋಲ್ ಗೇಟ್ ತೆರವು ಮಾಡಬೇಕೆಂದು ಟೋಲ್ ಗೇಟ್ ಸಮೀಪದ ಸರ್ವಿಸ್ ರಸ್ತೆಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಕಾರರು ಏಕಾಏಕಿ ಟೋಲ್ ಗೇಟ್ಗೆ ಮುತ್ತಿಗೆ ಹಾಕಿದ ಘಟನೆ ನಡೆದಿದೆ.
ಸಾವಿರಾರು ಮಂದಿ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತಾದರೂ ಪ್ರತಿಭಟನಕಾರರನ್ನು ತಡೆಯಲು ಪೊಲೀಸರು ಹರಸಾಹಸಪಟ್ಟರು. ಕಾಂಗ್ರೆಸ್ ಮುಖಂಡ ಮಿಥುನ್ ರೈ ಟೋಲ್ ಗೇಟ್ ಕೇಂದ್ರದ ಮೇಲೆ ನಿಂತು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಟೋಲ್ ಕೇಂದ್ರಕ್ಕೆ ಮುತ್ತಿಗೆ ಹಾಕುವ ಸಂದರ್ಭದಲ್ಲಿ ಟೋಲ್ ಸಂಗ್ರಹ ಕೇಂದ್ರದ ಗಾಜಿಗೆ ಹಾನಿಯಾಗಿದೆ. ಸದ್ಯ ಟೋಲ್ ಸಂಗ್ರಹವನ್ನು ಬಂದ್ ಮಾಡಲಾಗಿದ್ದು, ಪ್ರತಿಭಟನಕಾರರನ್ನು ಪೊಲೀಸರು ವಶಕ್ಜೆ ಪಡೆದಿದ್ದಾರೆ.
ಮಂಗಳೂರಿನ ಸುರತ್ಕಲ್ನಲ್ಲಿರುವ ಎನ್ಐಟಿಕೆ ತೆರವು ಮಾಡಬೇಕೆಂದು ಒತ್ತಾಯಿಸಿ ಸುರತ್ಕಲ್ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯಿಂದ ಪ್ರತಿಭಟನೆ ನಡೆಯುತ್ತಿದೆ. ಈ ಹಿನ್ನೆಲೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಟೋಲ್ ಗೇಟ್ ಮುಚ್ಚುವ ಭರವಸೆ ನೀಡಿದರೂ ಅದು ಈಡೇರದ ಕಾರಣ ಈ ಪ್ರತಿಭಟನೆ ನಡೆದಿದೆ. ಪ್ರತಿಭಟನೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಶೋಭಾ ಕರಂದ್ಲಾಜೆ, ಶಾಸಕರಾದ ಭರತ್ ಶೆಟ್ಟಿ, ಉಮನಾಥ ಕೋಟ್ಯಾನ್ ವಿರುದ್ದ ಘೋಷಣೆ ಕೂಗಿ ಅಕ್ರಮ ಟೋಲ್ ಗೇಟ್ ತೊಲಗಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಮಾಜಿ ಶಾಸಕರಾದ ಮೊಯ್ದಿನ್‌ಬಾವ, ಜೆ.ಆರ್ ಲೋಬೋ, ಐವನ್ ಡಿಸೋಜ, ಶಕುಂತಳಾ ಶೆಟ್ಟಿ, ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಡಿವೈಎಫ್ಐ ಮುಖಂಡರಾದ ಬಿ.ಕೆ ಇಮ್ತಿಯಾಝ್, ಸಂತೋಷ್ ಬಜಾಲ್, ಸಿಪಿಎಂ ಮುಖಂಡರಾದ ಯಾದವ್ ಶೆಟ್ಟಿ, ಸುನಿಲ್ ಕುಮಾರ್ ಬಜಾಲ್, ಕಾಂಗ್ರೆಸ್ ಮುಖಂಡರಾದ ಮಿಥುನ್ ರೈ, ಪ್ರತಿಭಾ ಕುಳಾಯಿ ಮೊದಲಾದವರು ನೇತೃತ್ವ ವಹಿಸಿದ್ದರು.
ನೋಟಿಸ್ ನೀಡಿದ್ದಕ್ಕೆ ಆಕ್ರೋಶ: ಟೋಲ್ ಗೇಟ್ ಹೋರಾಟದ ಹಿನ್ನೆಲೆ ರಾತ್ರಿ ಬಂದು ನೋಟಿಸ್ ನೀಡಿದ್ದಕ್ಕೆ ಕಾಂಗ್ರೆಸ್ ಮುಖಂಡೆ ಪ್ರತಿಭಾ ಕುಳಾಯಿ ಅವರು ಮಂಗಳೂರು ನಗರ ಪೊಲೀಸ್ ಕಮಿಷನರ್ ಅವರಲ್ಲಿ ತಮ್ಮ ಆಕ್ಷೇಪ ವ್ಯಕ್ತಪಡಿಸಿದ ಘಟನೆಯೂ ನಡೆಯಿತು.
ಟೋಲ್ ಗೇಟ್ ವಿವಾದ ಯಾಕೆ?.. ಮಂಗಳೂರಿನ ಸುರತ್ಕಲ್ ಎನ್ ಐ ಟಿ ಕೆ ಯಲ್ಲಿರುವ ಟೋಲ್ ಗೇಟ್ ತಾತ್ಕಾಲಿಕ ನೆಲೆಯಲ್ಲಿ ಆರಂಭಿಸಿದ ಟೋಲ್ ಗೇಟ್. ಬಿಸಿ ರೋಡ್ ನಿಂದ ಸುರತ್ಕಲ್ ನ ಎನ್ ಐ ಟಿ ಕೆ ವರೆಗೆ ರಸ್ತೆ ಚತುಷ್ಪಥ ರಸ್ತೆ ಮಾಡಿದ ಸಂದರ್ಭದಲ್ಲಿ ಈ ಟೋಲ್ ಗೇಟನ್ನು ಆರಂಭಿಸಲಾಗಿತ್ತು. ಈ ರಸ್ತೆಯನ್ನು ಅಭಿವೃದ್ದಿಪಡಿಸಿದ್ದು ಎನ್ ಎಂ ಪಿ ಟಿ. ಇದರ ಮಧ್ಯೆ ಸುರತ್ಕಲ್ ನಿಂದ ಉಡುಪಿ ಚತುಷ್ಪಥ ಕಾಮಗಾರಿ ಬಳಿಕ ಉಡುಪಿ ಜಿಲ್ಲೆಯ ಹೆಜಮಾಡಿ ಎಂಬಲ್ಲಿ ನವಯುಗ ಸಂಸ್ಥೆ ಟೋಲ್ ಗೇಟ್ ಆರಂಭಿಸಿತ್ತು. ಎನ್ ಐ ಟಿ ಕೆ ಮತ್ತು ಹೆಜಮಾಡಿ ಟೋಲ್ ಗೇಟ್ ನಡುವೆ ಅಂತರ 12 ಕಿ. ಮೀ. ರಾಷ್ಟ್ರೀಯ ಹೆದ್ದಾರಿ ನಿಯಮದ ಪ್ರಕಾರ ಒಂದು ಟೋಲ್ ಗೇಟ್ ನಿಂದ ಮತ್ತೊಂದು ಟೋಲ್ ಗೇಟ್ ಅಂತರ 60 ಕಿ.ಮೀ ಇರಬೇಕು ಎಂಬ ನಿಯಮವಿದೆ.
ಇದರ ನಡುವೆ ಎನ್ ಐ ಟಿ ಕೆ ಟೋಲ್ ಗೇಟ್ ಅನಧಿಕೃತ, ಇದನ್ನು ತೆರವು ಮಾಡಬೇಕು ಎಂದು ಕಳೆದ 6 ವರ್ಷಗಳಿಂದ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಪ್ರತಿಭಟನೆ ಮಾಡುತ್ತಿದೆ. ಇತ್ತೀಚೆಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಎನ್ ಐ ಟಿ ಕೆ ಟೋಲ್ ಗೇಟನ್ನು ಎನ್ ಎಂ ಪಿ ಟಿಯ ಒಳಗೆ ಸ್ಥಳಾಂತರಿಸುವ ಹೇಳಿಕೆ ನೀಡಿದ್ದರು. ಆ ಬಳಿಕ ಹಲವು ಬಾರಿ ಈ ಎನ್ ಐ ಟಿ ಕೆ ಟೋಲ್ ಗೇಟನ್ನು ಹೆಜಮಾಡಿ ಟೋಲ್ ಗೇಟ್ ನೊಂದಿಗೆ ವಿಲೀನ ಮಾಡುವ ಭರವಸೆ ನೀಡಲಾಗಿತ್ತು. ಆದರೆ ಇದ್ಯಾವುದು ಕಾರ್ಯಗತವಾಗದೆ ಇರುವುದರಿಂದ ಇಂದು ಬೃಹತ್ ಮಟ್ಟದಲ್ಲಿ ಪ್ರತಿಭಟನೆ ನಡೆದಿದೆ.
ಇದನ್ನೂ ಓದಿ: ಸುರತ್ಕಲ್ ಟೋಲ್ ಗೇಟ್ ತೆರವು ಕಾರ್ಯಾಚರಣೆ ಪ್ರತಿಭಟನೆ: ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್