ಬಂಟ್ವಾಳ: ಕೊರೊನಾ ವಿಷಯದಲ್ಲಿ ಸರ್ಕಾರ ಅವೈಜ್ಞಾನಿಕ ನಿರ್ಧಾರಗಳನ್ನು ಕೈಗೊಂಡಿದ್ದು, ಇದರಿಂದ ಬಡ ಮತ್ತು ಮಧ್ಯಮ ವರ್ಗದ ಜನರು ಸಂಕಷ್ಟಕ್ಕೊಳಗಾಗಿದ್ದಾರೆ. ಈ ಹಿನ್ನೆಲೆ ಸಮಾನ ಮನಸ್ಕ ನಾಗರಿಕ ಸಂಘಟನೆಗಳಿಂದ ಆ. 4ರಂದು ಬಿ.ಸಿ. ರೋಡ್ನ ಮಿನಿ ವಿಧಾನಸೌಧದ ಮುಂಭಾಗ ಜನಜಾಗೃತಿ ಆಂದೋಲನ ನಡೆಸಲಾಗುತ್ತದೆ ಎಂದು ಸಮಿತಿ ಅಧ್ಯಕ್ಷ ಬಿ.ಎಂ.ಪ್ರಭಾಕರ ದೈವಗುಡ್ಡೆ ಹೇಳಿದರು.
ಪದಾಧಿಕಾರಿಗಳ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೊರೊನಾ ಪಿಪಿಇ ಕಿಟ್ ಖರೀದಿಯಲ್ಲಿ ಆಗಿರುವ ಭ್ರಷ್ಟಾಚಾರದ ಬಗ್ಗೆ ಸೂಕ್ತ ತನಿಖೆಯಾಗಬೇಕು. ಕೊರೊನಾ ಪೀಡಿತರಿಗೆ ಕ್ವಾರಂಟೈನ್ ಮಾಡುವ ಸಂದರ್ಭ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಕೊರೊನಾದಿಂದ ಮೃತಪಟ್ಟವರ ಅಂತ್ಯ ಸಂಸ್ಕಾರವನ್ನು ನಡೆಸಲು ಮೃತರ ಕುಟುಂಬದವರಿಗೆ ಅವಕಾಶ ಕಲ್ಪಿಸಬೇಕು. ಆದರೆ ಸರ್ಕಾರದ ಇದರಲ್ಲಿ ವಿಫಲವಾಗಿದ್ದು, ಜನಜಾಗೃತಿ ಆಂದೋಲನ ನಡೆಸುವುದಾಗಿ ಹೇಳಿದರು.
ಸಭೆಯಲ್ಲಿ ಸಮಿತಿ ಪ್ರಧಾನ ಕಾರ್ಯದರ್ಶಿ ಬಿ.ಶೇಖರ್, ಸಹಕಾರ್ಯದರ್ಶಿಗಳಾದ ರಾಮಣ್ಣ ವಿಟ್ಲ, ಸುರೇಶ್ ಕುಮಾರ್ ಬಂಟ್ವಾಳ್, ಸಮಿತಿಯ ಕಾನೂನು ಸಲಹೆಗಾರ ನ್ಯಾಯವಾದಿ ಎಂ.ಚಂದ್ರಶೇಖರ ಪೂಜಾರಿ, ಕೋಶಾಧಿಕಾರಿ ಸುರೇಂದ್ರ ಕೋಟ್ಯಾನ್, ಸದಸ್ಯ ರಾಜಾ ಚಂಡ್ತಿಮಾರ್ ಉಪಸ್ಥಿತರಿದ್ದರು.