ಮಂಗಳೂರು (ದಕ್ಷಿಣಕನ್ನಡ): ಕರಾವಳಿ ಜಿಲ್ಲೆಯಲ್ಲಿ ತುಳು ಮಾತೃಭಾಷೆ ಕಡೆಗಣಿಸಿ ಕನ್ನಡ ಹೇರಿಕೆ ಮಾಡುತ್ತಿರುವ ಸರಕಾರದ ನೀತಿಯನ್ನು ಖಂಡಿಸಿ ತುಳು ಭಾಷಾ ಸಂರಕ್ಷಣಾ ಸಮಿತಿ ನಗರದ ಕ್ಲಾಕ್ ಟವರ್ ಮುಂಭಾಗ ಪ್ರತಿಭಟನೆ ನಡೆಸಿತು. ಈ ಸಂದರ್ಭ ಪ್ರತಿಭಟನಾಕಾರರು ಬಸ್ ಅನ್ನು ತಡೆದು ತುಳುಲಿಪಿಯ ಸ್ಟಿಕ್ಕರ್ ಅಂಟಿಸಿ ಸರಕಾರದ ನಡೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕನ್ನಡ ಕಡ್ಡಾಯ ತುಳು ಭಾಷೆಗೆ ಅನ್ಯಾಯ : ಈ ವೇಳೆ, ಪ್ರತಿಭಟನಾಕಾರರು 'ಕನ್ನಡ ಕಡ್ಡಾಯ ತುಳು ಭಾಷೆಗೆ ಅನ್ಯಾಯ', 'ಕನ್ನಡ ಸಂಸ್ಕೃತಿ ಇಲಾಖೆಯ ಸಚಿವರಿಗೆ ಧಿಕ್ಕಾರ', ಕನ್ನಡವೇ ಸತ್ಯ, ಕನ್ನಡವೇ ನಿತ್ಯ ಆದರೆ ನಮಗೆ ತುಳು ಅಗತ್ಯ' ಎಂಬಂತಹ ಪೋಸ್ಟರ್ ಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು.
ಈ ವೇಳೆ, ಮಾತನಾಡಿದ ಪ್ರತಿಭಟನಾಕಾರರು, ತುಳುಭಾಷೆ ಒಂದು ಸಮುದಾಯದ ಒಂದು ಜಾತಿಯ ಭಾಷೆಯಲ್ಲ. ಇದೊಂದು ಪ್ರದೇಶದ ಭಾಷೆಯಾಗಿದೆ. ಸಾವಿರಾರು ವರ್ಷಗಳಿಂದ ಬಳಕೆಯಲ್ಲಿರುವ ಈ ತುಳು ಭಾಷೆಗೆ ಶಾಸ್ತ್ರೀಯ ಭಾಷಾ ಸ್ಥಾನಮಾನ ದೊರಕುವ ಎಲ್ಲ ಅರ್ಹತೆಗಳಿರುತ್ತದೆ.
ಆದರೆ, ಸರಕಾರ ಇಂದು ತುಳುಭಾಷೆಗೆ ರಾಜ್ಯಭಾಷೆಯ ಸ್ಥಾನಮಾನ ಇನ್ನೂ ಕೊಟ್ಟಿಲ್ಲ. ಇದರಿಂದ ಕನಿಷ್ಠ ಪಕ್ಷ ಗ್ರಾಮಪಂಚಾಯತ್ ನಲ್ಲೂ ತುಳು ಭಾಷೆಯಲ್ಲಿ ಮಾತನಾಡುವ ಅಧಿಕಾರವಿಲ್ಲ. ಆದ್ದರಿಂದ ಸರಕಾರ ಕನ್ನಡ ಭಾಷಾ ಹೇರಿಕೆಯನ್ನು ಕೈಬಿಟ್ಟು ತಮ್ಮ ಅಧಿಕಾರವನ್ನು ಬಳಸಿಕೊಂಡು ತುಳುವನ್ನು ಅಧಿಕೃತ ರಾಜ್ಯ ಭಾಷೆಯನ್ನಾಗಿ ಮಾಡಲಿ ಎಂದು ಒತ್ತಾಯಿಸಿದರು.
ಇದನ್ನೂ ಓದಿ : ಎಸ್ ಡಿಪಿಐ- ಪಿಎಫ್‌ಐ ಎರಡೂ ಬಿಜೆಪಿಯ ಬಿ ಟೀಂಗಳು : ಶಾಸಕ ಯತೀಂದ್ರ ಸಿದ್ದರಾಮಯ್ಯ