ಬೆಳ್ತಂಗಡಿ(ದಕ್ಷಿಣಕನ್ನಡ): ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತ ಮತ್ತು ಕಾರ್ಮಿಕ ವಿರೋಧಿ ಕಾಯ್ದೆಯನ್ನು ಸುಗ್ರೀವಾಜ್ಞೆ ಮೂಲಕ ಜಾರಿ ತರಲು ಹೊರಟಿರುವುದು ಖಂಡನೀಯ. ಮೋದಿ ಇಡೀ ದೇಶವನ್ನು ಸರ್ವನಾಶ ಮಾಡಲು ಹೊರಟಿದ್ದಾರೆ ಎಂದು ಮಾಜಿ ಶಾಸಕ ವಸಂತ ಬಂಗೇರ ಕಿಡಿಕಾರಿದರು.
ಬೆಳ್ತಂಗಡಿಯಲ್ಲಿ ಕೃಷಿ ಮಸೂದೆ ಸುಗ್ರೀವಾಜ್ಞೆ ವಿರೋಧಿಸಿ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಮಾತನಾಡಿದ ಅವರು, ರೈತರು ದೇಶದ ಬೆನ್ನುಲುಬು ಎಂದು ಮೋದಿ ಹಾಗೂ ಯಡಿಯೂರಪ್ಪ ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಆದರೆ, ಇದೀಗ ರೈತರ ಬೆನ್ನೆಲುಬು ಮುರಿಯುವಂತಹ ಕೆಲಸವನ್ನು ಮಾಡುತ್ತಿದ್ದಾರೆ. ಬಿಜೆಪಿ ಸರ್ಕಾರ ರೈತ ವಿರೋಧಿ ಸರ್ಕಾರ. ಮೋದಿ ದೇಶವನ್ನು ಸರ್ವನಾಶ ಮಾಡಲು ಹೊರಟಿದ್ದಾರೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.
ಬೇರೆ-ಬೇರೆ ರೀತಿಯ ಸುಗ್ರೀವಾಜ್ಞೆಗಳು ಅಧಿವೇಶನದಲ್ಲಿ ಅಂಗೀಕಾರ ಆಗದಿದ್ದರೂ, ಸುಗ್ರೀವಾಜ್ಞೆ ಮೂಲಕ ಎಪಿಎಂಸಿ ತಿದ್ದುಪಡಿ ಜಾರಿ ಮಾಡಬೇಕು. ಈ ಮೂಲಕ ಕಾರ್ಪೋರೆಟ್ ವಲಯಗಳ ರಕ್ಷಣೆ ಮಾಡಬೇಕು ಎಂದು ಕೇಂದ್ರ ಸರ್ಕಾರದ ಸಚಿವರೊಬ್ಬರು ರಾಜ್ಯ ಸರ್ಕಾರಕ್ಕೆ ಲಿಖಿತ ಆದೇಶ ನೀಡುವ ಮೂಲಕ ಯಾವುದೇ ಚರ್ಚೆಗಳಿಗೆ ಅವಕಾಶ ಕೊಡದೆ ಅಂಗೀಕಾರ ಪಡೆಯುವಂತಹ ಕೆಲಸವನ್ನು ಮಾಡುತ್ತಿದ್ದಾರೆ ಎಂದರು.
ನಂತರ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿ ವಾಹನ ತಡೆದು ಪ್ರತಿಭಟನೆ ನಡೆಸಿದರು. ಬೆಳ್ತಂಗಡಿ ಪೊಲೀಸರು ಕೆಲ ಪ್ರತಿಭಟನಾಕಾರರನ್ನು ಬಂಧಿಸಿ, ನಂತರ ಬಿಡುಗಡೆಗೊಳಿಸಿದರು.