ಮಂಗಳೂರು : ಗೇರುಕೃಷಿ ತೋಟಕ್ಕೆ ಕಾಡುವ ಸಮಸ್ಯೆಗಳ ನಿವಾರಣೆಗೆ ಬಳಸಲಾಗುತ್ತಿದ್ದ 27 ರಾಸಾಯನಿಕಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ಎಂಡೋಸಲ್ಫಾನ್ ಸಿಂಪಡಣೆಯ ಬಳಿಕ ಆದ ದುರಂತದ ಹಿನ್ನೆಲೆ ಕರಾವಳಿ ಜಿಲ್ಲೆಯ ಗೇರು ಕೃಷಿಕರು ರಾಸಾಯನಿಕ ಸಿಂಪಡಣೆಯಿಂದ ದೂರ ಸರಿದರಾದರೂ ಫಲವತ್ತತೆ ಸಿಗದೆ ಸಮಸ್ಯೆಯಲ್ಲಿದ್ದಾರೆ. ಅಪಾಯಕಾರಿ ರಾಸಾಯನಿಕ ನಿಷೇಧವನ್ನು ಸ್ವಾಗತಿಸುತ್ತಾ ಗೇರು ಕೃಷಿ ಉಳಿಸಲು ಪರಿಸರ ಪೂರಕ ರಾಸಾಯನಿಕ ತಯಾರಿಗೆ ಆದ್ಯತೆ ನೀಡುವಂತೆ ಗೇರು ಕೃಷಿಕರು ಆಗ್ರಹಿಸಿದ್ದಾರೆ.
ಸ್ವಾದಿಷ್ಟ ಗೋಡಂಬಿಗಳನ್ನು ಬೆಳೆಯುವ ಗೇರುಕೃಷಿ ಕರಾವಳಿ ಜಿಲ್ಲೆಯಲ್ಲಿ ಹೆಚ್ಚಾಗಿ ನಡೆಯುತ್ತಿದೆ. ಮೂವತ್ತು ವರ್ಷಗಳ ಹಿಂದೆ ಕರಾವಳಿಯ ಗೇರು ಕೃಷಿಗಳಲ್ಲಿ ಕಾಣಿಸಿಕೊಂಡ ಹುಳದ ಸಮಸ್ಯೆಗೆ ಎಂಡೋಸಲ್ಫಾನ್ ಪರಿಹಾರವಾಗಿ ಕಂಡು ಬಂತು. ಹಾಗಾಗಿ ಹೆಲಿಕಾಪ್ಟರ್ ಮೂಲಕ ಎಂಡೋಸಲ್ಪಾನ್ ಸಿಂಪಡಿಸಲಾಯಿತು. ಇದರಿಂದ ಗೇರು ಕೃಷಿಗೆ ಲಾಭವಾಯಿತಾದರೂ, ಆ ಭಾಗದಲ್ಲಿ ಮಾನವನ ಮೇಲೆ ದುಷ್ಪರಿಣಾಮ ಬೀರಿ ಅಂಗವೈಕಲ್ಯದ ಮಕ್ಕಳು ಜನಿಸುವ ಸ್ಥಿತಿ ನಿರ್ಮಾಣವಾಯಿತು.
ಇದರಿಂದ ಎಂಡೋಸಲ್ಫಾನ್ ನಿಷೇಧವಾಯಿತು. ನಂತರದ ದಿನಗಳಲ್ಲಿ ಗೇರುತೋಟಗಳಲ್ಲಿ ಮತ್ತೆ ಗೇರು ಹೂ ಬಿಟ್ಟ ವೇಳೆ ಹುಳಗಳು ತಿನ್ನುವುದು ಮುಂತಾದವುಗಳ ಸಮಸ್ಯೆ ಬಂದಾಗ ಸರ್ಕಾರದ ಅನುಮತಿ ಇರುವ ರಾಸಾಯನಿಕ ಬಳಕೆ ಆರಂಭವಾಯಿತು. ಆದರೆ, ಇದೀಗ ಈ ರಾಸಾಯನಿಕಗಳನ್ನು ಕೂಡ ಸರ್ಕಾರ ನಿಷೇಧಿಸಿದೆ. ಆದ್ದರಿಂದ ಗೇರು ಕೃಷಿ ಉಳಿಸಲು ಪರಿಸರ ಪೂರಕ ರಾಸಾಯನಿಕ ತಯಾರಿಗೆ ಆದ್ಯತೆ ನೀಡುವಂತೆ ಗೇರು ಕೃಷಿಕರು ಆಗ್ರಹಿಸುತ್ತಿದ್ದಾರೆ.
ಈ ಕುರಿತು ಮಾತನಾಡಿದ ವಿಧಾನಪರಿಷತ್ ಸದಸ್ಯ ಹಾಗೂ ಗೇರು ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಐವನ್ ಡಿಸೋಜ, ಗೇರು ಹಣ್ಣು ಫಸಲು ಬರುವ ವೇಳೆ ಹೂಗಳು ಬಿಟ್ಟ ಕೂಡಲೇ ಹುಳದ ಭಾಧೆಯಿಂದ ಗೋಡಂಬಿಯ ಗಾತ್ರದಲ್ಲಿ ವ್ಯತ್ಯಾಸ ಆಗುತ್ತಿತ್ತು. ಇದಕ್ಕೆ ರಾಸಾಯನಿಕ ಸಿಂಪಡಣೆ ಮಾಡಿದರೆ ಎಲ್ಲ ಸರಿಯಾಗುತ್ತದೆ ಎಂಬ ವಿಜ್ಞಾನಿಗಳ ಸಲಹೆ ಮೇರೆಗೆ ಹೆಲಿಕಾಪ್ಟರ್ ಮೂಲಕ ಎಂಡೋಸಲ್ಪಾನ್ ಸಿಂಪಡಿಸಲಾಯಿತು. ಆದರೆ, ಇದು ಮಾನವ ಜೀವಕ್ಕೆ ಅಪಾಯಕಾರಿ ಎಂದು ನಿಷೇಧಿಸಲಾಯಿತು. ಇದೀಗ ಮತ್ತೆ ಚಾಲ್ತಿಯಲ್ಲಿದ್ದ ರಾಸಾಯನಿಕ ನಿಷೇಧಿಸುವುದನ್ನು ಸ್ವಾಗತಿಸುತ್ತೇನೆ. ಆದರೆ, ಇದಕ್ಕೆ ಪರ್ಯಾಯ ಏನು ಮಾಡಬೇಕು ಎಂಬುದನ್ನು ವಿಜ್ಞಾನಿಗಳು ತಿಳಿಸಬೇಕು ಎಂದು ಕೇಳಿಕೊಂಡಿದ್ದಾರೆ.